ಡೆಹ್ರಾಡೂನ್: ಕಣಿವೆಗೆ ಉರುಳಿದ ಬಸ್; 13 ಮಂದಿ ಸಾವು

ಡೆಹ್ರಾಡೂನ್, ಅ. 31: ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ಬಸ್ಸೊಂದು ಕಣಿವೆಗೆ ಉರುಳಿ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ ಎಂದು ಡೆಹ್ರಾಡೂನ್ನ ಜಿಲ್ಲಾ ದಂಡಾಧಿಕಾರಿ ಡಾ. ಆರ್. ರಾಜೇಶ್ ಕುಮಾರ್ ಅವರು ತಿಳಿಸಿದ್ದಾರೆ.
ಡೆಹ್ರಾಡೂನ್ ಜಿಲ್ಲೆಯ ಚಕ್ರತಾ ತಾಲೂಕಿನ ಬುಲ್ಹಾಡ್-ಬೈಲಾ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ. ‘‘ಬಸ್ಸೊಂದು ಕಣಿವೆಗೆ ಉರುಳಿರುವ ಬಗ್ಗೆ ನಾವು ಮಾಹಿತಿ ಸ್ವೀಕರಿಸಿದ್ದೆವು. ನಮ್ಮ ತಂಡ ಕೂಡಲೇ ಅಪಘಾತ ಸಂಭವಿಸಿದ ಸ್ಥಳಕ್ಕೆ ಧಾವಿಸಿತು. 13 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಇಬ್ಬರನ್ನು ರಕ್ಷಿಸಲಾಗಿದೆ’’ ಎಂದು ರಾಜೇಶ್ ಕುಮಾರ್ ತಿಳಿಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಕುಟುಂಬದವರಿಗೆ ಹಾಗೂ ಗಾಯಗೊಂಡವರಿಗೆ ಪರಿಹಾರ ನೀಡಲಾಗುವುದು ಎಂದು ಉತ್ತರಾಖಂಡದ ಮುಖ್ಯಮಂತ್ರಿ ಅವರು ಸಂದೇಶ ನೀಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಧನ ನೀಡಲಾಗುವುದು ಎಂದು ಪ್ರಧಾನ ಮಂತ್ರಿ ಅವರ ಕಚೇರಿಯ ಟ್ವೀಟ್ ಹೇಳಿದೆ.