ಇಂದಿರಾ ಗಾಂಧಿ ಮಹಿಳಾ ಶಕ್ತಿಗೆ ಅತ್ಯುತ್ತಮ ಉದಾಹರಣೆ: ರಾಹುಲ್ ಗಾಂಧಿ
ಇಂದಿರಾ ಗಾಂಧಿ ಪುಣ್ಯ ತಿಥಿ

ಹೊಸದಿಲ್ಲಿ, ಅ. 31: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 37ನೇ ಪುಣ್ಯ ತಿಥಿಯಾದ ರವಿವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೊಸದಿಲ್ಲಿಯ ಶಕ್ತಿ ಸ್ಥಳದಲ್ಲಿ ಇಂದಿರಾ ಗಾಂಧಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು.
ಅನಂತರ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ಉಕ್ಕಿನ ಮಹಿಳೆ’ ಎಂದು ಕರೆಯಲಾಗುತ್ತಿದ್ದ ಇಂದಿರಾ ಗಾಂಧಿ ಅವರು ಮಹಿಳಾ ಶಕ್ತಿಗೆ ಅತ್ಯುತ್ತಮ ಉದಾಹರಣೆ ಎಂದರು. ‘‘ನನ್ನ ಅಜ್ಜಿ ಕೊನೆಯ ಘಳಿಗೆ ವರೆಗೆ ಭೀತಿಯಿಲ್ಲದ ದೇಶಕ್ಕೆ ನಿರಂತರ ಸೇವೆ ಸಲ್ಲಿಸಿದ್ದಾರೆ. ಅವರ ಬದುಕು ನಮಗೆ ಪ್ರೇರಣೆ. ಮಹಿಳಾ ಶಕ್ತಿಗೆ ಅವರು ಅತ್ಯುತ್ತಮ ಉದಾಹರಣೆ’’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಇಂದಿರಾ ಗಾಂಧಿ ಅವರು ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿರಿಸಿರುವುದು ಹಾಗೂ ಸಲ್ಲಿಸಿರುವ ಸೇವೆಯನ್ನು ಕಾಂಗ್ರೆಸ್ ನೆನಪಿಸಿಕೊಂಡಿದೆ.
‘‘ಅವರು ಮಹಿಳಾ ಶಕ್ತಿಯನ್ನು, ತ್ಯಾಗವನ್ನು, ಸೇವೆಯನ್ನು ಪ್ರತಿನಿಧಿಸುತ್ತಾರೆ. ನಮ್ಮ ದೇಶದ ಮೊದಲ ಮಹಿಳಾ ಪ್ರಧಾನಿ, ನಿಜವಾದ ಭಾರತ ರತ್ನ, ಉಕ್ಕಿನ ಮಹಿಳೆಗೆ ಅವರ ಪುಣ್ಯ ತಿಥಿಯಂದು ಲಕ್ಷಾಂತರ ವಂದನೆಗೆಳು’’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕೂಡ ಇಂದಿರಾ ಗಾಂಧಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ‘‘ಇಂದಿರಾ ಗಾಂಧಿ ಅವರು ಸಮರ್ಥ ಹಾಗೂ ದೃಢ ಭಾರತದ ಸೃಷ್ಟಿಕರ್ತೆ. ದೇಶದ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನಿ ಆಗಿದ್ದ ಇಂದಿರಾ ಗಾಂಧಿ ಅವರು ಅತ್ಯುತ್ತಮ ಆಡಳಿತ ಸಾಮರ್ಥ್ಯ ಹೊದಿದ್ದರು. ಇಂದಿರಾ ಗಾಂಧಿ ಅವರು ಪ್ರಧಾನ ಮಂತ್ರಿ ಆಗಿದ್ದಾಗ ದೇಶ ಅಭಿವೃದ್ಧಿಯಲ್ಲಿ ಹೊಸ ಆಯಾಮ ಕಂಡುಕೊಂಡಿತು. ಅಲ್ಲದೆ ಭಾರತ ಜಗತ್ತಿನಲ್ಲಿ ಹೊಸ ವರ್ಚಸ್ಸನ್ನು ಪಡೆದುಕೊಂಡಿತು. ಅವರ ಪುಣ್ಯತಿಥಿಯ ದಿನವಾದ ಇಂದು ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ’’ ಎಂದು ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.







