ಅಫ್ಘಾನ್: ಮೊದಲ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡ ತಾಲಿಬಾನ್ ಪರಮೋಚ್ಚ ನಾಯಕ ಅಖುಂದ್ ಝಾದಾ

photo:twitter/@AFP
ಕಾಬೂಲ್,ಅ.31: ತಾಲಿಬಾನ್ನ ಪರಮೋಚ್ಚ ನಾಯಕ ಹೈಬತುಲ್ಲಾ ಅಖುಂದ್ ಝಾದಾ ಅವರು ದಕ್ಷಿಣದ ಕಂದಹಾರ್ ನಗರದಲ್ಲಿ ಅಪರೂಪವಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ ಎಂದು ತಾಲಿಬಾನ್ ಮೂಲಗಳು ರವಿವಾರ ತಿಳಿಸಿದ್ದು,ಇದರೊಂದಿಗೆ ಅವರು ಬದುಕಿಲ್ಲ ಎಂಬ ವ್ಯಾಪಕ ವದಂತಿಗಳಿಗೆ ತೆರೆ ಬಿದ್ದಿದೆ.
‘ಆಮಿರ್ ಉಲ್ ಮೊಮಿನೀನ್(ನಿಷ್ಠಾವಂತರ ನಾಯಕ)’ ಎಂದೂ ಕರೆಯಲ್ಪಡುವ ಅಖುಂದ್ ಝಾದಾ ಕಳೆದ ಆಗಸ್ಟ್ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕವೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ ಮತ್ತು ಇದು ಅವರು ಬದುಕುಳಿದಿಲ್ಲ ಎಂಬ ಊಹಾಪೋಹಗಳನ್ನು ಹುಟ್ಟು ಹಾಕಿತ್ತು.
ತಾಲಿಬಾನಿ ಪರಮೋಚ್ಚ ನಾಯಕ ಅ.30ರಂದು ಕಂದಹಾರ್ನಲ್ಲಿಯ ಧಾರ್ಮಿಕ ವಿದ್ಯಾಸಂಸ್ಥೆ ಜಾಮಿಯಾ ದಾರುಲ್ ಅಲೂಮ್ ಹಕೀಮಿಯಾಕ್ಕೆ ಭೇಟಿ ನೀಡಿದ್ದರು ಎಂದು ಅವರ ಜೊತೆಯಲ್ಲಿದ್ದ ಹಿರಿಯ ತಾಲಿಬಾನ್ ನಾಯಕರೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.
ಅಮೆರಿಕದ ಸೇನೆಯು ಅಫ್ಘಾನಿಸ್ತಾನದಿಂದ ಹಿಂದೆ ಸರಿದ ನಂತರ ಸೆಪ್ಟಂಬರ್ನಲ್ಲಿ ತಾಲಿಬಾನ್ ಮಧ್ಯಂತರ ಸರಕಾರವನ್ನು ರಚಿಸಿದ ಬಳಿಕ ಅಖುಂದ್ ಝಾದಾ 2016ರಿಂದಲೂ ತಾನು ಹೊಂದಿದ್ದ ತಾಲಿಬಾನ್ನ ರಾಜಕೀಯ,ಧಾರ್ಮಿಕ ಮತ್ತು ಮಿಲಿಟರಿ ವ್ಯವಹಾರಗಳ ಸರ್ವೋಚ್ಚ ನಾಯಕನ ಸ್ಥಾನವನ್ನು ಉಳಿಸಿಕೊಂಡಿದ್ದರು.
ಈ ಹಿಂದೆಯೂ ಅಖುಂದ್ ಝಾದಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರಾರೂ ಅದು ಸುದ್ದಿಯಾಗಿರಲಿಲ್ಲ ಎಂದು ಕೆಲವು ಅಧಿಕಾರಿಗಳು ಹೇಳಿದ್ದರೂ,ಇದು ಅವರ ಮೊದಲ ಅಧಿಕೃತವಾಗಿ ದೃಢಪಟ್ಟಿರುವ ಬಹಿರಂಗ ದರ್ಶನವಾಗಿದೆ.
ಅಖುಂದ್ ಝಾದಾ ಅವರ ಸುತ್ತಲಿನ ನಿಗೂಢತೆಯಿಂದಾಗಿ ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಮತ್ತು ಅವರ ಆರೋಗ್ಯದ ಕುರಿತು ವದಂತಿಗಳು ನಿರಂತರವಾಗಿ ಹರಿದಾಡುತ್ತಿದ್ದವು.
ಈ ಹಿಂದೆ ತಾಲಿಬಾನ್ ತನ್ನ ಸ್ಥಾಪಕ ಮತ್ತು ಮೂಲ ಪರಮೋಚ್ಚ ನಾಯಕ ಮುಲ್ಲಾ ಉಮರ್ ಸಾವಿನ ಸುದ್ದಿಯನ್ನು ವರ್ಷಗಟ್ಟಲೆ ದೃಢಪಡಿಸಿರಲಿಲ್ಲ.







