ಸಮೀರ್ ವಾಂಖೆಡೆ ಮನೆಗೆ ಎಸ್ಸಿ ಆಯೋಗ ಭೇಟಿ, ಜಾತಿ ಪ್ರಮಾಣ ಪತ್ರ ಪರಿಶೀಲನೆ

photo: ANI
ಮುಂಬೈ: ನಕಲಿ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ಅಕ್ರಮವಾಗಿ ಪಡೆದಿದ್ದಾರೆಂದು ಎನ್ಸಿಬಿ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಆರೋಪಿಸಿದ ನಂತರ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ (ಎನ್ಸಿಎಸ್ಸಿ) ರವಿವಾರ ಸಮೀರ್ ಮತ್ತು ಅವರ ಕುಟುಂಬದ ಪ್ರಮಾಣಪತ್ರಗಳನ್ನು ಪರಿಶೀಲಿಸಲು ಅವರ ನಿವಾಸಕ್ಕೆ ಭೇಟಿ ನೀಡಿದೆ.
ಇದಕ್ಕೂ ಮುನ್ನ ಎನ್ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರು ನವಾಬ್ ಮಲಿಕ್ ತಮ್ಮ ವಿರುದ್ಧ ಮಾಡಿರುವ ಆರೋಪವನ್ನು ನಿರಾಕರಿಸಿದ್ದರು. ತನ್ನ ತಂದೆ ಹಿಂದೂ ಆಗಿದ್ದರೆ, ಮೃತ ತಾಯಿ ಮುಸ್ಲಿಂ ಎಂದು ಸಮೀರ್ ಸ್ಪಷ್ಟಪಡಿಸಿದ್ದರು.
“ನಾನು ವಿಶೇಷ ವಿವಾಹ ಕಾಯಿದೆಯಡಿ ಮದುವೆಯಾಗಿದ್ದೇನೆ. ನನ್ನ ತಂದೆಯ ಜಾತಿ ಸವಲತ್ತುಗಳನ್ನು ಪಡೆಯಲು ನಾನು ಅರ್ಹನಾಗಿದ್ದೇನೆ” ಎಂದು ಅವರು ಹೇಳಿದರು.
ಸಮೀರ್ ವಾಂಖೆಡೆ ತಮ್ಮ ಜಾತಿ ಪ್ರಮಾಣಪತ್ರವನ್ನು ನಕಲಿ ಮಾಡಿರುವುದು 100 ಶೇ.ಖಚಿತವಾಗಿದೆ ಎಂದು ಎನ್ಸಿಪಿ ನಾಯಕ ನವಾಬ್ ಮಲಿಕ್ ಅವರು ಹೇಳಿದ್ದಾರೆ. ರಾಜ್ಯ ಜಾತಿ ಪರಿಶೀಲನಾ ಸಮಿತಿಯು ಮಾಡುವ ಜಾತಿ ಪ್ರಮಾಣಪತ್ರವನ್ನು ಪರಿಶೀಲಿಸಲು ಎಸ್ಸಿ ರಾಷ್ಟ್ರೀಯ ಆಯೋಗಕ್ಕೆ ಯಾವುದೇ ಹಕ್ಕು ಹಾಗೂ ಅಧಿಕಾರ ವ್ಯಾಪ್ತಿ ಇಲ್ಲ ಎಂದು ಅವರು ಹೇಳಿದರು.
ಆರೋಪದ ನಂತರ ಸಮೀರ್ ವಾಂಖೆಡೆ ಎನ್ಸಿಎಸ್ಸಿಯಲ್ಲಿ ದೂರು ದಾಖಲಿಸಿದ್ದರು. ಆಯೋಗವು ಈ ವಿಷಯದ ಬಗ್ಗೆ ತನಿಖೆಯನ್ನು ಆರಂಭಿಸಿತು. ಸಮೀರ್ ರವಿವಾರ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ (ಎನ್ಸಿಎಸ್ಸಿ) ಮುಂದೆ ತಮ್ಮ ಜಾತಿ ಪ್ರಮಾಣಪತ್ರಗಳನ್ನು ಸಲ್ಲಿಸಿದರು.