ಮಧ್ಯಪ್ರದೇಶ ಗೃಹಸಚಿವರ ಎಚ್ಚರಿಕೆಯ ಬಳಿಕ ʼಮಂಗಳಸೂತ್ರʼ ಜಾಹೀರಾತು ಹಿಂಪಡೆದ ʼಸಬ್ಯಸಾಚಿʼ

ಮುಂಬೈ: ಹಿಂದೂ ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳನ್ನು ಜಾಹೀರಾತುಗಳಲ್ಲಿ ಅಸಭ್ಯವಾಗಿ ಬಿಂಬಿಸಲಾಗುತ್ತಿದೆ ಎಂಬ ಆರೋಪಗಳನ್ನು ವ್ಯಕ್ತಪಡಿಸಿದ ಪರಿಣಾಮ ಈಗಾಗಲೇ ಹಲವಾರು ಪ್ರಮುಖ ಬ್ರಾಂಡ್ ಗಳು ತಮ್ಮ ಜಾಹೀರಾತನ್ನು ವಾಪಸ್ ಪಡೆದುಕೊಂಡಿದ್ದವು. ಇದೀಗ ʼಮಂಗಳಸೂತ್ರʼವನ್ನು ಅಸಭ್ಯವಾಗಿ ತೋರಿಸಲಾಗಿದೆ ಎಂಬ ಆರೋಪ ಪ್ರಮುಖ ಡಿಸೈನರ್ ಸಬ್ಯಸಾಚಿ ವಿರುದ್ಧ ಕೇಳಿ ಬಂದಿದ್ದು, ಮಧ್ಯಪ್ರದೇಶ ಗೃಹಸಚಿವರ ನರೋತ್ತಮ್ ಮಿಶ್ರಾ ಎಚ್ಚರಿಕೆಯ ಬಳಿಕ ಇದೀಗ ಜಾಹೀರಾತು ಹಿಂಪಡೆಯಲಾಗಿದೆ ಎಂದು ತಿಳಿದು ಬಂದಿದೆ.
"ಪರಂಪರೆ ಮತ್ತು ಸಂಸ್ಕೃತಿಯನ್ನು ಕ್ರಿಯಾತ್ಮಕ ಸಂಭಾಷಣೆಯ ರೂಪದಲ್ಲಿ ನಿರೂಪಿಸುವ ವೇಳೆ ಮಂಗಳಸೂತ್ರ ಅಭಿಯಾನವು ಒಳಗೊಳ್ಳುವಿಕೆ ಮತ್ತು ಸಬಲೀಕರಣದ ಕುರಿತು ಮಾತನಾಡುವ ಉದ್ದೇಶ ಹೊಂದಿದೆ. ಇದೊಂದು ಆಚರಣೆಯ ಅಭಿಯಾನವಾಗಿದ್ದರೂ. ಸಮಾಜದ ಒಂದು ವರ್ಗದ ಭಾವನೆಗಳಿಗೆ ಧಕ್ಕೆ ತಂದಿರುವುದರ ಕುರಿತು ದುಃಖಿಸುತ್ತೇವೆ. ಹಾಗಾಗಿ ಈ ಅಭಿಯಾನವನ್ನು ಹಿಂಪಡೆಯಲು ಸಬ್ಯಸಾಚಿ ನಿರ್ಧರಿಸಿದೆ" ಎಂದು ಸಾಮಾಜಿಕ ತಾಣದ ಪೋಸ್ಟ್ ನಲ್ಲಿ ಅಧಿಕೃತ ಹೇಳಿಕೆ ನೀಡಲಾಗಿದೆ.
"ಇಂತಹ ನೋವಿನ ವಿಚಾರಗಳು ಯಾಕೆ ಹಿಂದೂ ಧರ್ಮದ ಗುರುತುಗಳನ್ನು ಗುರಿಪಡಿಸುತ್ತದೆ? ಸಬ್ಯಸಾಚಿ ಮುಖರ್ಜಿಗೆ ಅಷ್ಟೊಂದು ಧೈರ್ಯವಿದ್ದರೆ ಬೇರೆ ಧರ್ಮಗಳ ಬಗ್ಗೆ ಮಾಡಬೇಕಿತ್ತು, ಆಗ ಅವರೆಷ್ಟು ಧೈರ್ಯವಂತರು ಎಂದು ತಿಳಿಯುತ್ತಿತ್ತು. ೨೪ ಗಂಟೆಯೊಳಗಡೆ ಈ ಈ ಜಾಹೀರಾತು ಹಿಂಪಡೆಯಬೇಕು" ಎಂದು ಮಧ್ಯಪ್ರದೇಶ ಗೃಹಸಚಿವ ನರೋತ್ತಮ್ ಮಿಶ್ರಾ ಎಚ್ಚರಿಕೆ ನೀಡಿದ್ದರು.