ನಾನು ಚುನಾವಣೆಗೆ ಸ್ಪರ್ಧಿಸಲು ಮುಕ್ತನಾಗಿದ್ದೇನೆ: ಲಿಯಾಂಡರ್ ಪೇಸ್

photo: twitter
ಹೊಸದಿಲ್ಲಿ: ನಾನು ಚುನಾವಣೆಗೆ ಸ್ಪರ್ಧಿಸಲು ಮುಕ್ತನಾಗಿದ್ದೇನೆ. ಈ ವಿಚಾರವನ್ನು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನಿರ್ಧರಿಸಲಿ ಎಂದು ಮಾಜಿ ಟೆನಿಸ್ ತಾರೆ ಲಿಯಾಂಡರ್ ಪೇಸ್ NDTV ಗೆ ತಿಳಿಸಿದ್ದಾರೆ.
ಪೇಸ್ ಅವರು ಇತ್ತೀಚೆಗೆ ಗೋವಾದಲ್ಲಿ ಮಮತಾ ಬ್ಯಾನರ್ಜಿ ಅವರ ಪಕ್ಷ ತೃಣಮೂಲ ಕಾಂಗ್ರೆಸ್ ಪಕ್ಷ(ಟಿಎಂಸಿ)ವನ್ನು ಸೇರಿದ್ದರು. ಈ ಮೂಲಕ ಅವರು ಕ್ರೀಡೆಯಿಂದ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದರು.
ಮುಂದಿನ ವರ್ಷ ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ, "ನಾನು ಚುನಾವಣೆಗೆ ಸ್ಪರ್ಧಿಸಲು ಸಿದ್ಧನಿದ್ದೇನೆ, ಮಮತಾ ಬ್ಯಾನರ್ಜಿ ಅದನ್ನು ನಿರ್ಧರಿಸಲಿ" ಎಂದು ಹೇಳಿದರು.
"ಗೋವಾ ರಾಜ್ಯದಲ್ಲಿ ಪಕ್ಷವನ್ನು ಸೇರಲು ನೇರವಾಗಿ ತನ್ನನ್ನು ಪಕ್ಷ ಸಂಪರ್ಕಿಸಿತ್ತು. ಮಮತಾ ಬ್ಯಾನರ್ಜಿ ಅವರೊಂದಿಗಿನ ನನ್ನ ಸಂಬಂಧವು ಹಲವು ವರ್ಷಗಳ ಹಿಂದಿನದು. ಮಮತಾ ದೀದಿ ಏನನ್ನಾದರೂ ಹೇಳಿದಾಗ ಅದನ್ನು ಮಾಡಿಯೇ ತೀರುತ್ತಾರೆ. ... ಅವರು ನಿಜವಾದ ಚಾಂಪಿಯನ್" ಎಂದು 48ರ ವಯಸ್ಸಿನ ಪೇಸ್ NDTV ಗೆ ತಿಳಿಸಿದರು.
18 ಬಾರಿಯ ಗ್ರ್ಯಾಂಡ್ ಸ್ಲಾಮ್ ವಿಜೇತ ಪೇಸ್ ಅವರ ತಾಯಿ ಬಂಗಾಳದವರಾದರೆ, ತಂದೆ ಗೋವಾದವರು.
"ಟೆನಿಸ್ ಪರಂಪರೆಯಿಂದ ನನ್ನನ್ನು ದೂರವಿಟ್ಟಿದೆ. ಆದರೆ ನಾನು ಈಗ ಹಿಂತಿರುಗಿದ್ದೇನೆ ... ಗೋವಾದಲ್ಲಿ ಒಳ್ಳೆಯದನ್ನು ಮಾಡಲು ದೊಡ್ಡ ಅವಕಾಶಗಳನ್ನು ನೋಡುತ್ತೇನೆ. ನಾನು ಭಾರತಕ್ಕಾಗಿ ಆಡುತ್ತೇನೆ, ಕೇವಲ ನನ್ನ ವಾಹನ ಮಾತ್ರ ಬದಲಾಗಿದೆ" ಎಂದು ಪೇಸ್ ಹೇಳಿದರು.