ಪಂಜಾಬ್ ನಲ್ಲಿ ವಿದ್ಯುತ್ ದರ ಪ್ರತಿ ಯೂನಿಟ್ ಗೆ 3 ರೂ. ಕಡಿತ: ಚರಣ್ ಜೀತ್ ಸಿಂಗ್

ಚಂಡೀಗಢ: ಪಂಜಾಬ್‌ನಲ್ಲಿ ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ ಮೂರು ರೂಪಾಯಿ ಕಡಿತಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಸೋಮವಾರ ಘೋಷಿಸಿದ್ದಾರೆ.
ಇಂದಿನಿಂದಲೇ ಹೊಸ ದರಗಳು ಅನ್ವಯವಾಗಲಿವೆ.
ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಅವರ ಉಚಿತ ವಿದ್ಯುತ್ ನೀಡುವ ಚುನಾವಣೆಯ ಭರವಸೆಗೆ ತಿರುಗೇಟು ನೀಡಿದ ಚನ್ನಿ, ತಮ್ಮ ಸರಕಾರದ ಸಮೀಕ್ಷೆಯ ಪ್ರಕಾರ ಜನರು ವಿದ್ಯುತ್ ಅಗ್ಗವಾಗುವುದನ್ನು ಬಯಸುತ್ತಾರೆ ಹಾಗೂ ಉಚಿತ ವಿದ್ಯುತ್ ಅನ್ನು ಅವರು ಬಯಸುತ್ತಿಲ್ಲ ಎಂದರು.
ಸರಕಾರದ ಈ ಕ್ರಮವು ಪಂಜಾಬ್‌ನ 95 ಪ್ರತಿಶತ ನಿವಾಸಿಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಮುಖ್ಯಮಂತ್ರಿ ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇಂದು ಹಲವಾರು ಘೋಷಣೆಗಳನ್ನು ಮಾಡಲಾಗಿದೆ. ಪಂಜಾಬ್‌ನಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಯಲಿದ್ದು,ಎಲ್ಲಾ ಪಕ್ಷಗಳು ರಾಜ್ಯದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿವೆ.
ರಾಜ್ಯ ಸರಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ನಲ್ಲಿ 11 ಪ್ರತಿಶತ ಹೆಚ್ಚಳವನ್ನು ಘೋಷಿಸಿದರು. ಇದಕ್ಕಾಗಿ ರೂ. 440 ಕೋಟಿ ಮಂಜೂರು ಮಾಡಲಾಗುವುದು ಎಂದು ಚನ್ನಿ ಹೇಳಿದರು.