ಖಾಸಗಿ, ಅರೆ ಸರಕಾರಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕಿಸಿ ಕೊಡಲು ಆದ್ಯತೆ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು, ನ. 1: ‘ಕನ್ನಡಿಗರಿಗೆ ಖಾಸಗಿ, ಸರಕಾರಿ ಹಾಗೂ ಅರೆ ಸರಕಾರಿ ವಲಯದಲ್ಲಿ ಉದ್ಯೋಗ ದೊರಕಿಲು ಆದ್ಯತೆ ನೀಡಲಾಗುವುದು. ಅದರ ಜತೆ ಔದ್ಯೋಗಿಕ ನೀತಿಯ ಪರಿಣಾಮಕಾರಿ ಅನುಷ್ಠಾನದಿಂದ ಕೌಶಲ್ಯ, ಅರೆ ಕೌಶಲ್ಯ ವಲಯದಲ್ಲಿ ಶೇ.75ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೆ ದೊರಕಿಸಲು ಸರಕಾರ ಆದ್ಯತೆ ನೀಡುತ್ತಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 66ನೆ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ಆಡಳಿತದಲ್ಲಿ ಕನ್ನಡದ ಪರಿಣಾಮಕಾರಿ ಬಳಕೆಗೆ ಈಗಾಗಲೇ ಹೊರಡಿಸಿರುವ ಆದೇಶಗಳ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು. ಕನ್ನಡಿಗರಿಗೆ ಉತ್ತಮ ಆಡಳಿತ ನೀಡಲು ಆಡಳಿತ ಸುಧಾರಣಾ ಸಮಿತಿಯ ಪ್ರಥಮ ವರದಿಯ ಪ್ರಮುಖ ಭಾಗಗಳ ಅನುಷ್ಠಾನ ಮುಖ್ಯ ಎಂದರು.
‘ಔದ್ಯೋಗಿಕ ನೀತಿಯ ಪರಿಣಾಮಕಾರಿ ಅನುಷ್ಠಾನದಿಂದ ಕೌಶಲ್ಯ, ಅರೆ ಕೌಶಲ್ಯ ವಲಯದಲ್ಲಿ ಶೇ.75ರಷ್ಟು ಉದ್ಯೋಗವನ್ನು ಕ್ನಡಿಗರಿಗೆ ದೊರಕಿಸಲು ಸರಕಾರ ಆದ್ಯತೆ ನೀಡುತ್ತಿದೆ. ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‍ಯಡಿಯೂರಪ್ಪ ಅವರು ರಾಜ್ಯದ 180 ಸರಕಾರಿ ಐಟಿಐಗಳ ಉನ್ನತೀಕರಣಕ್ಕೆ ಚಾಲನೆ ನೀಡಿದ್ದು ಇದೇ ತಿಂಗಳು ಉನ್ನತೀಕರಣದ ಕಾರ್ಯ ಪೂರ್ಣಗೊಂಡು ವಿದ್ಯಾರ್ಥಿಗಳಿಗೆ ಮುಕ್ತವಾಗಲಿದೆ' ಎಂದು ಹೇಳಿದರು.
‘ಪ್ರಾಥಮಿಕ ಮಟ್ಟದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ದೊರಕಿಸಿ ಜಾಗತಿಕ ಮಟ್ಟದಲ್ಲಿ ಪೈಪೋಟಿಗೆ ಸಿದ್ಧರಾಗುವಂತೆ ತಯಾರು ಮಾಡಲಾಗುವುದು. ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದು, ಮಾತೃಭಾಷೆಯಲ್ಲಿಯೇ ಉನ್ನತ ಹಾಗೂ ತಾಂತ್ರಿಕ ಶಿಕ್ಷಣವನ್ನು ಪಡೆಯಲು ನಮ್ಮ ಸರಕಾರ ಅನುವು ಮಾಡಿಕೊಟ್ಟಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಯಾವುದೇ ಪ್ರದೇಶ ಹಿಂದುಳಿಯಲು ಬಿಡುವುದಿಲ್ಲ: ‘ಕರ್ನಾಟಕದ ಯಾವುದೇ ಪ್ರದೇಶವನ್ನು ಹಿಂದುಳಿಯಲು ಬಿಡುವುದಿಲ್ಲ ಎಂಬ ಸಂಕಲ್ಪ ನಮ್ಮ ಸರಕಾರದ್ದು. ಮುಂಬೈ ಕರ್ನಾಟಕವನ್ನು ‘ಕಿತ್ತೂರು ಕರ್ನಾಟಕ' ಎಂದು ಘೋಷಣೆ ಮಾಡಲು ಸರಕಾರ ಬದ್ಧವಾಗಿದೆ. ಹೆಸರು ಬದಲಾವಣೆಯ ಜೊತೆಗೆ ಆ ಭಾಗದ ಜನರ ಬದುಕು ಹಸನಾಗಬೇಕು. ಪ್ರಗತಿ ಹೊಂದಬೇಕು. ಆ ಮೂಲಕ ಪ್ರಾದೇಶಿಕ ಅಸಮತೋಲನ ನಿವಾರಣೆ ಆಗಬೇಕು. ಆ ನಿಟ್ಟಿನಲ್ಲಿ ಸರ್ವ ಪ್ರಯತ್ನವನ್ನೂ ಮಾಡಲಾಗುವುದು' ಎದು ಅವರು ಭರವಸೆ ನೀಡಿದರು.
ಕಲ್ಯಾಣ ಕರ್ನಾಟಕದ ಅಭಿವೃದ್ದಿಗೆ 3 ಸಾವಿರ ಕೋಟಿ ರೂ.ವಿಶೇಷ ಅನುದಾನವನ್ನು ಸರಕಾರ ಒದಗಿಸಲಿದೆ. ಕೃಷ್ಣ ಮತ್ತು ಕಾವೇರಿ ಜಲಾನಯನ ಪ್ರದೇಶದ ಸಮಗ್ರ ಅಭಿವೃದ್ದಿ, ಔದ್ಯೋಗೀಕರಣಕ್ಕೆ ಸರಕಾರ ಯೋಜನೆಗಳನ್ನು ರೂಪಿಸಲಿದೆ. ಅಲ್ಲದೆ, ರಾಜ್ಯದ ಸಮಗ್ರ ಅಭಿವೃದ್ಧಿಗೆ ಸರಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳಿದರು.
ರಾಜ್ಯೋತ್ಸವ ನಿತ್ಯೋತ್ಸವವಾಗಲಿ: ‘ಎಲ್ಲ ವಿಚಾರಗಳಲ್ಲಿಯೂ ಕನ್ನಡಕ್ಕೆ ಅಗ್ರಸ್ಥಾನ ನೀಡಿ ಕನ್ನಡಿಗರ ಬದುಕು, ಭವಿಷ್ಯವನ್ನು ಕಟ್ಟೋಣ. ಮುಂದಿನ ದಿನಗಳಲ್ಲಿ ಕನ್ನಡ ರಾಜ್ಯೋತ್ಸವ ನಿತ್ಯೋತ್ಸವ, ಜನೋತ್ಸವವಾಗಬೇಕು. ಈ ಗುರಿ ತಲುಪುವವರೆಗೆ ವಿರಮಿಸುವುದಿಲ್ಲ ಎಂದ ಅವರು, ಕೋವಿಡ್ ಕಾರಣದಿಂದ ಸೀಮಿತವಾಗಿ ರಾಜ್ಯೋತ್ಸವ ಆಚರಿಸುತ್ತಿದ್ದರೂ ಉತ್ಸಾಹ, ಚೈತನ್ಯ ಕುಂದಿಲ್ಲ. ಕನ್ನಡ ನಮ್ಮೆಲ್ಲರನ್ನೂ ಒಗ್ಗೂಡಿಸಿದೆ. ಅದು ನಮ್ಮೆಲ್ಲರ ಬೇರು. ಈ ತಾಯಿ ಬೇರನ್ನು ಸಂರಕ್ಷಿಸಿ, ವಿಶ್ವದಲ್ಲಿ ಹೆಮ್ಮರವಾಗಿಸಿ, ಮನುಕುಲಕ್ಕೆ ಕನ್ನಡದ ಮಹತ್ವ, ಪ್ರಯೋಜನ ಮತ್ತು ಸ್ವಾಭಿಮಾನವನ್ನು ತಿಳಿಸುವ ಶತಮಾನವಿದು ಎಂದು ಹೇಳಿದರು.
ಕನ್ನಡದ ಅಸ್ತಿತ್ವ ಸುದೀರ್ಘ ಬದಲಾವಣೆಗಳ ಮಧ್ಯೆಯೂ ಗಟ್ಟಿಯಾಗಿ ನಿಂತಿದೆ. ಸಾಂಸ್ಕøತಿಕ ಆಡಳಿತಾತ್ಮಕ ಹಾಗೂ ಐತಿಹಾಸಿಕ ದಾಳಿಗಳನ್ನು ಕನ್ನಡ ಎದುರಿಸಿ ನಿಂತಿದೆ. ಕನ್ನಡಕ್ಕೇ ತನ್ನದೇ ಅಂತರ್ಗತ ಶಕ್ತಿ ಇದೆ. ಸೂರ್ಯ-ಚಂದ್ರ ಇರುವವರೆಗೂ ಯಾವುದೇ ಶಕ್ತಿ ಕನ್ನಡವನ್ನು ಅಳಿಸಲು ಸಾಧ್ಯವಿಲ್ಲ ಎಂದು ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.







