ಕನ್ನಡವನ್ನು ಉಳಿಸುವುದು ನಮ್ಮ ಮುಂದಿರುವ ದೊಡ್ಡ ಸವಾಲು: ಅಜಿತ್ ಕುಮಾರ್ ರೈ

ಬೆಂಗಳೂರು, ನ.1: ಕನ್ನಡ ಭಾಷೆಯನ್ನು ಬೆಳೆಸುವುದರ ಜೊತೆಗೆ ಕನ್ನಡವನ್ನು ಉಳಿಸುವುದು ಇಂದು ನಮ್ಮ ಮುಂದಿರುವ ದೊಡ್ಡ ಸವಾಲು. ಒಂದು ಕಡೆ ಗಡಿನಾಡುಗಳ ಪ್ರಭಾವ ಹೆಚ್ಚುತ್ತಿರುವುದರಿಂದ ಕನ್ನಡ ಭಾಷೆ ಬಳಕೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ಅಜಿತ್ ಕುಮಾರ್ ರೈ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ಕೆ.ಆರ್.ಪುರದಲ್ಲಿರುವ ಬೆಂಗಳೂರು ಪೂರ್ವ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ 66ನೆ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, ನಾನು ರಾಜ್ಯದ ಗಡಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಕೆಲವೊಮ್ಮೆ ಭಾಷಾಂತರ ಮಾಡುವವರನ್ನು ಜೊತೆಯಲ್ಲಿಟ್ಟುಕೊಂಡು ಕೆಲಸ ಮಾಡುವಂತಹ ಪರಿಸ್ಥಿತಿಯನ್ನು ಎದುರಿಸಿದ್ದೇನೆ ಎಂದರು.
ಬೆಳಗಾವಿ ಜಿಲ್ಲೆಯ ಗಡಿಯಲ್ಲಿ ಮರಾಠಿ, ಬಳ್ಳಾರಿ ಗಡಿಯಲ್ಲಿ ತೆಲುಗು ಭಾಷೆಯ ಪ್ರಭಾವವಿದೆ ಎಂದು ಎಲ್ಲರೂ ಚರ್ಚೆ ಮಾಡುತ್ತಾರೆ. ಆದರೆ, ಇಲ್ಲೆ ಸಮೀಪದ ಶಿಡ್ಲಘಟ್ಟದಲ್ಲಿ ಕನ್ನಡ ಭಾಷೆ ಬಳಸುವ ಕುರಿತು ತಿಳುವಳಿಕೆ ಇಲ್ಲದವರೂ ಎಷ್ಟೋ ಮಂದಿ ಇದ್ದಾರೆ. ಅವರ ಮೇಲೆ ತೆಲುಗು ಭಾಷೆಯ ಪ್ರಭಾವ ಅಷ್ಟೊಂದಿದೆ ಎಂದ ಅವರು, ಕನ್ನಡ ಕಟ್ಟುವುದು, ಬೆಳೆಸುವುದು ಎರಡು ನಮ್ಮ ಧರ್ಮ ಎಂದು ಅವರು ಹೇಳಿದರು.
1956ರಲ್ಲಿ ಕನ್ನಡ ಭಾಷಿಕರು ಇರುವ ಪ್ರಾಂತ್ಯಗಳನ್ನು ಒಂದುಗೂಡಿಸಲಾಯಿತು. 1973ರಲ್ಲಿ ಮೈಸೂರು ರಾಜ್ಯ ಎಂಬ ಹೆಸರನ್ನು ಬದಲಿಸಿ ಕರ್ನಾಟಕ ಎಂದು ಮರು ನಾಮಕರಣಗೊಳಿಸಲಾಯಿತು. ಕನ್ನಡ ಭಾಷಿಕರು ಇರುವ ಪ್ರಾಂತ್ಯಗಳನ್ನು ಒಗ್ಗೂಡಿಸುವ ಏಕೀಕರಣ ಚಳವಳಿಯಲ್ಲಿ ಹಲವಾರು ಮಹನೀಯರು ಪಾಲ್ಗೊಂಡಿದ್ದರು. ಇವತ್ತು ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಎಂದು ಅಜಿತ್ ಕುಮಾರ್ ರೈ ತಿಳಿಸಿದರು.
ಜಾಗತೀಕರಣದ ಪ್ರಭಾವದಿಂದಾಗಿ ನಾವು ಹಲವಾರು ಭಾಷೆಗಳನ್ನು ಕಲಿಯಬೇಕಾದ ಅನಿವಾರ್ಯತೆ ಇದೆ. ಆದರೆ, ನಮ್ಮ ಭಾಷೆಯನ್ನು ಆದ್ಯತೆಯ ಮೇಲೆ ಕಲಿಯುವುದನ್ನು ರೂಢಿಸಿಕೊಳ್ಳಬೇಕು. ನಮ್ಮ ಭಾಷೆ ಕನ್ನಡ, ನಮ್ಮ ಹೆಮ್ಮೆ ಎಂದು ಅಭಿಮಾನದಿಂದ ಕಾಣಬೇಕು. ಇತ್ತೀಚಿನ ದಿನಗಳಲ್ಲಿ ಪೋಷಕರು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದನ್ನೆ ಪ್ರತಿಷ್ಠೆ ಎಂದು ತಿಳಿದುಕೊಂಡಿದ್ದಾರೆ. ಪೋಷಕರು ತಮ್ಮ ಮಕ್ಕಳಿಗೆ ಯಾವ ಭಾಷೆಯ ಮಾಧ್ಯಮದಲ್ಲಾದರೂ ಶಿಕ್ಷಣ ಕೊಡಿಸಲಿ, ಆದರೆ ಕನ್ನಡ ಭಾಷೆಯ ಕಲಿಕೆಗೂ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಪೂರ್ವ ತಾಲೂಕಿನ ವಿಶೇಷ ತಹಶೀಲ್ದಾರ್ ನಾಗಪ್ರಶಾಂತ್, ಉಪ ತಹಶೀಲ್ದಾರ್ ಸುರೇಶ್, ನಿವೃತ್ತ ಪ್ರಾಧ್ಯಾಪಕ ಪ್ರೊ.ವೆಂಕಟರಮಣ, ಕನ್ನಡಪರ ಸಂಘಟನೆಗಳ ಮುಖಂಡರಾದ ಚಂದ್ರಪ್ಪ, ಕೆ.ಪಿ.ಕೃಷ್ಣ, ಸಾಹುಕಾರ್ ಗಿರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.








