ನ.8ರಿಂದ ಅಂಗನವಾಡಿ ಆರಂಭ: ಸಚಿವ ಹಾಲಪ್ಪ ಆಚಾರ್

ಸಚಿವ ಹಾಲಪ್ಪ ಆಚಾರ್
ಬೆಂಗಳೂರು, ನ.1: ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಅಂಗನವಾಡಿಗಳನ್ನು ನ.8ರಿಂದ ಬೆಳಗ್ಗೆಯಿಂದ ಮಧ್ಯಾಹ್ನ 3ರವರೆಗೆ ತೆರೆಯಲಾಗುವುದು. ಹಾಗಾಗಿ ಕಳೆದ ಎರಡು ದಿನದಿಂದ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಸಾನಿಟೈಜ್ ಮಾಡಿ, ಅಗತ್ಯ ಸಿದ್ಧತೆ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.
ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಾತನಾಡಿದ ಅವರು, ಕೊರೋನ ಸೋಂಕಿನ ಭೀತಿಯಿಂದ ಕಳೆದ ಇಪ್ಪತು ತಿಂಗಳಿಂದ ಅಂಗನವಾಡಿ ಮತ್ತು ಶಾಲಾ ಕಾಲೇಜುಗಳನ್ನು ಮುಚ್ಚಲಾಗಿತ್ತು. ರಾಜ್ಯದಲ್ಲಿ ಕೊರೋನ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಈಗಾಗಲೇ ಆರಂಭವಾಗಿವೆ. ಹಾಗೆಯೇ ಇಲ್ಲಿಯವರೆಗೂ ಯಾವುದೇ ವಿದ್ಯಾರ್ಥಿಗಳಿಗೆ ಸೋಂಕು ಕಂಡುಬಂದಿಲ್ಲ್ಲ. ಹಾಗಾಗಿ ನ.8ರಿಂದ ಅಂಗನವಾಡಿಗಳನ್ನು ತೆರೆಯಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಮಕ್ಕಳ ಹಿತದೃಷ್ಟಿಯಿಂದ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ವಿತರಿಸುವುದು ಅತ್ಯಗತ್ಯ. ಆದುದರಿಂದ ಅಂಗನವಾಡಿ ಕೇಂದ್ರಗಳನ್ನು ರಾಜ್ಯಾದ್ಯಂತ ನ. 8ರಿಂದ ಆರಂಭಿಸಲಾಗುವುದು. ಕೋವಿಡ್ ನಿಯಮಗಳ ಅನ್ವಯ ಅಂಗನವಾಡಿ ಕಾರ್ಯಕರ್ತರು ಎರಡು ಡೋಸ್ಗಳ ಲಸಿಕೆ ಪಡೆದಿರಬೇಕು. ಹಾಗೆಯೇ ಸಾಮಾಜಿಕ ಅಂತರವನ್ನು ಪಾಲಿಸಬೇಕಾಗಿರುವುದರಿಂದ ಮಕ್ಕಳನ್ನು ಗುಂಪುಗಳಾಗಿ ವಿಂಗಡಿಸಲಾಗುವುದು. ಒಂದೊಂದು ಗುಂಪು ಒಂದೊಂದು ದಿನ ಅಂಗನವಾಡಿಗೆ ಹಾಜರಾಗುವಂತೆ ಶಿಪಾರಸ್ಸು ಮಾಡಲಾಗುವುದು ಎಂದರು.







