ಅಧಿಕೃತ ಘೋಷಣೆಗೆ ಮುನ್ನವೇ ಟಿವಿ ಚಾನೆಲ್ ಗಳು ಪುನೀತ್ ಮೃತದೇಹದ ದೃಶ್ಯಗಳನ್ನು ತೋರಿಸಿದ್ದು ಅನೈತಿಕ: ಇಲ್ಲಿವೆ ಕಾರಣಗಳು

ಬೆಂಗಳೂರು,ನ.1: ಕರ್ನಾಟಕದ ಹಲವಾರು ಜನರು ಇನ್ನೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಾವಿನ ಆಘಾತದಿಂದ ಇನ್ನೂ ಹೊರಬಂದಿಲ್ಲ. ಶುಕ್ರವಾರ ಕೊನೆಯುಸಿರೆಳೆದ ಪುನೀತ್ ಕೇವಲ ಸ್ಟಾರ್ ಮಾತ್ರ ಆಗಿರಲಿಲ್ಲ,ತನ್ನ ವಿನಮ್ರ ನಡವಳಿಕೆಯಿಂದಾಗಿ ಅವರು ಜನಸಾಮಾನ್ಯರ ಹೃದಯಗಳಲ್ಲಿ ವಿಶೇಷ ಸ್ಥಾನವನ್ನೂ ಪಡೆದಿದ್ದರು. ವಿಷಾದದ ವಿಷಯವೆಂದರೆ ಯುವನಟನ ಅಗಲಿಕೆಯ ಆ ಸಂದರ್ಭದಲ್ಲಿ ಟಿವಿ ಸುದ್ದಿವಾಹಿನಿಗಳು ಅತ್ಯಂತ ಬೇಜವಾಬ್ದಾರಿತನವನ್ನು ಪ್ರದರ್ಶಿಸಿದ್ದವು,ನೀತಿ ಸಂಹಿತೆ ಮತ್ತು ಪ್ರಸಾರ ಮಾನದಂಡಗಳನ್ನು ಸಾರಾಸಗಟಾಗಿ ಉಲ್ಲಂಘಿಸಿದ್ದವು. ಅನೈತಿಕತೆಯನ್ನು ಮೆರೆದಿದ್ದವು.ಇದನ್ನು ಖಂಡಿತವಾಗಿಯೂ ಖಂಡಿಸಲೇಬೇಕು. ಟಿವಿ ವಾಹಿನಿಗಳ ಹೊಣೆಗೇಡಿತನವನ್ನು ಬೆಟ್ಟು ಮಾಡಿ ಸುದ್ದಿ ಜಾಲತಾಣ thenewsminute.com ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತ ವಿನಯ್ ಶ್ರೀನಿವಾಸ್ ರವರು ಬರೆದಿರುವ ವಿಶ್ಲೇಷಣಾತ್ಮಕ ವರದಿಯೊಂದನ್ನು ಪ್ರಕಟಿಸಿದ್ದು,ಅದರ ಸಾರಾಂಶವಿಲ್ಲಿದೆ.....
ಅ.29ರಂದು ಅಪರಾಹ್ನ ಒಂದು ಗಂಟೆಯ ಸುಮಾರಿಗೆ ಕನ್ನಡದ ಎಲ್ಲ ಸುದ್ದಿವಾಹಿನಿಗಳು ಪುನೀತ್ ಅವರ ಅನಾರೋಗ್ಯದ ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದವು ಮತ್ತು ಅವರನ್ನು ದಾಖಲಿಸಲಾಗಿದ್ದ ಬೆಂಗಳೂರಿನ ವಿಕ್ರಂ ಆಸ್ಪತ್ರೆಯ ಹೊರಗೆ ಅವರ ಸಾವಿರಾರು ಅಭಿಮಾನಿಗಳು ಗೋಳಾಡುತ್ತಿರುವ ದೃಶ್ಯಗಳನ್ನು ತೋರಿಸುತ್ತಿದ್ದವು. ಆ ಸಂದರ್ಭದಲ್ಲಿ ಇದು ಆಕ್ಷೇಪಾರ್ಹವಾಗಿರಲಿಲ್ಲ. ಪುನೀತ್ ಇನ್ನಿಲ್ಲವೆಂಬ ಸುದ್ದಿಯನ್ನು ವಾಟ್ಸ್ಆ್ಯಪ್ ಗುಂಪುಗಳು ಹಂಚಿಕೊಳ್ಳಲು ಆರಂಭಿಸಿದಾಗಲೂ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂಬ ಸುದ್ದಿಯ ಪ್ರಸಾರವನ್ನು ಟಿವಿ ವಾಹಿನಿಗಳು ಮುಂದುವರಿಸಿದ್ದವು. ಅಷ್ಟರ ಮಟ್ಟಿಗೆ ಸುದ್ದಿ ಪ್ರಸಾರವು ಸೀಮಿತ ವ್ಯಾಪ್ತಿಯಲ್ಲಿಯೇ ಇತ್ತು ಮತ್ತು ಅಗೌರವದಿಂದ ಕೂಡಿರಲಿಲ್ಲ.
ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿರಲಿಲ್ಲ ಮತ್ತು ಪುನೀತ್ ಇನ್ನಿಲ್ಲವೆಂಬ ಹತಾಶೆ ಹೆಚ್ಚುತ್ತಲೇ ಇತ್ತು,ಇದರ ನಡುವೆಯೇ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ವ್ಯವಸ್ಥೆಗಳನ್ನು ಮಾಡುತ್ತಿದ್ದರು. ವರನಟ ಡಾ.ರಾಜಕುಮಾರ ಅವರು ನಿಧನರಾದಾಗ ಬೆಂಗಳೂರು ವ್ಯಾಪಕ ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು. ಅವರ ಕುಟುಂಬವು ಶಾಂತಿಯುತವಾಗಿ ಅಂತ್ಯಸಂಸ್ಕಾರವನ್ನು ನೆರವೇರಿಸಲೂ ಸಾಧ್ಯವಾಗಿರಲಿಲ್ಲ. ಯಾವುದೇ ಸಿದ್ಧತೆಗಳನ್ನು ಮಾಡಿಕೊಳ್ಳದೆ ರಾಜ್ ನಿಧನವನ್ನು ಪ್ರಕಟಿಸಿದ್ದಕ್ಕಾಗಿ ಪೊಲೀಸರನ್ನು ಟೀಕಿಸಲಾಗಿತ್ತು. ಹಿರಿಯ ನಟ ವಿಷ್ಣುವರ್ಧನ್ ನಿಧನರಾದಾಗಲೂ ಹಿಂಸಾಚಾರವು ನಡೆದಿತ್ತಾದರೂ ಅದು ಅಲ್ಪ ಪ್ರಮಾಣದಲ್ಲಿತ್ತು. ಹೀಗಾಗಿ ನಿರೀಕ್ಷೆಯಂತೆ,ಯಾವುದೇ ಸ್ಥಿತಿಯನ್ನು,ವಿಶೇಷವಾಗಿ ಇದು ಅನಿರೀಕ್ಷಿತ ಆಘಾತದ ಸಂದರ್ಭವಾಗಿದ್ದರಿಂದ,ಎದುರಿಸಲು ಸಜ್ಜಾಗಿರಲು ಆಡಳಿತವು ಬಯಸಿತ್ತು. ಪುನೀತ ಅಗಲಿಕೆಯ ಸುದ್ದಿಯನ್ನು ಸ್ವೀಕರಿಸಲು ಜನರನ್ನು ಮಾನಸಿಕವಾಗಿ ಸಜ್ಜುಗೊಳಿಸಿದ್ದಕ್ಕಾಗಿ ಪೊಲೀಸರು ಮತ್ತು ಆಡಳಿತವನ್ನು ಪ್ರಶಂಸಿಸಲೇಬೇಕು.
ಆದರೆ ಅಪರಾಹ್ನ ಎರಡು ಗಂಟೆಯ ಬಳಿಕ ಪುನೀತ್ ಸಾವನ್ನು ಅಧಿಕೃತವಾಗಿ ಘೋಷಿಸಿರದಿದ್ದರೂ ಟಿವಿ ವಾಹಿನಿಗಳು ಅವರು ವಿಧಿವಶರಾಗಿದ್ದಾರೆ ಎಂದು ಬಿತ್ತರಿಸತೊಡಗಿದ್ದವು. ಆದರೆ ಸುವರ್ಣ ನ್ಯೂಸ್,ಟಿವಿ 9 ಇತ್ಯಾದಿ ವಾಹಿನಿಗಳು ಸ್ಟ್ರೆಚರ್ ಮೇಲಿರಿಸಿದ್ದ ಪುನೀತ್ ಅವರ ಮೃತದೇಹದ ದೃಶ್ಯಗಳನ್ನು ಪ್ರಸಾರ ಮಾಡತೊಡಗಿದ್ದು ಹಲವರಿಗೆ ಈ ವಾಹಿನಿಗಳ ಬಗ್ಗೆ ಜುಗುಪ್ಸೆಯನ್ನು ಮೂಡಿಸಿದ್ದಂತೂ ನಿಜ.
ಇದು ಟಿವಿ ವಾಹಿನಿಗಳ ಅಕ್ಷಮ್ಯ ಕೃತ್ಯವಾಗಿತ್ತು. ಏಕೆಂದರೆ ನಟನನ್ನು,ಅವರ ಮತ್ತು ಅವರ ಕುಟುಂಬದ ಖಾಸಗಿತನವನ್ನು ಅವಮಾನಿಸಿದ್ದು ಯಾವುದೇ ರೀತಿಯಲ್ಲಿಯೂ ಸದಭಿರುಚಿಯಿಂದ ಕೂಡಿರಲಿಲ್ಲ. ಇಂತಹ ದೃಶ್ಯಗಳು ಸುಲಭವಾಗಿ ನಗರದಲ್ಲಿಯ ಕಾನೂನು ಮತ್ತು ಸುವ್ಯವಸ್ಥೆಗೆ ಬೆದರಿಕೆಯನ್ನು ಒಡ್ಡಬಲ್ಲವಾಗಿದ್ದವು. ಎಲ್ಲ ಸಿದ್ಧತೆಗಳು ಮುಗಿದ ಬಳಿಕವೇ ಅಧಿಕೃತವಾಗಿ ಘೋಷಿಸಲು ಸರಕಾರವು ಕಾಳಜಿಯನ್ನು ವಹಿಸಿದ್ದಾಗ ಸುದ್ದಿವಾಹಿನಿಗಳು ಅದನ್ನು ಪ್ರಸಾರ ಮಾಡಿದ್ದೇಕೆ? ಮೃತದೇಹದ ಚಿತ್ರವನ್ನು ತೋರಿಸಿದ್ದೇಕೆ? ಯಾರಾದರೂ ಹಿಂಸಾತ್ಮಕವಾಗಿ ವರ್ತಿಸಲಿ ಎಂದು ಅವು ಬಯಸಿದ್ದವೇ?
ಕನ್ನಡ ವಾಹಿನಿಗಳು ಪುನೀತ್ ಅವರು ಆಸ್ಪತ್ರೆ ಹಾಸಿಗೆಯಲ್ಲಿರುವ ಹಲವಾರು ದೃಶ್ಯಗಳನ್ನು ತೋರಿಸಿದ್ದನ್ನು ಟ್ವಿಟರಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.
ಕನ್ನಡ ವಾಹಿನಿಗಳು ಹೊಣೆಗೇಡಿತನದಿಂದ ವರ್ತಿಸಿದ್ದು ಇದು ಮೊದಲ ಸಲವೇನಲ್ಲ. 2020,ಆಗಸ್ಟ್ನಲ್ಲಿ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದಿದ್ದ ಹಿಂಸಾಚಾರವನ್ನು ವರದಿ ಮಾಡಿದಾಗಲೂ ಅದು ಜನರನ್ನು ಇನ್ನಷ್ಟು ಹಿಂಸಾಚಾರಕ್ಕೆ ಪ್ರಚೋದಿಸುವಂತಿತ್ತು. ಈ ಬಗ್ಗೆ ‘ಕ್ಯಾಂಪೇನ್ ಅಗೇನ್ಸ್ಟ್ ಹೇಟ್ ಸ್ಪೀಚ್’ ಟಿವಿ 9 ಮತ್ತು ಸುವರ್ಣ ನ್ಯೂಸ್ ವಿರುದ್ಧ ಪೊಲೀಸ್ ದೂರುಗಳನ್ನೂ ದಾಖಲಿಸಿತ್ತು.
ಟಿವಿ ವಾಹಿನಿಗಳ ನಡವಳಿಕೆ ಅಗೌರವದಿಂದ ಕೂಡಿದ್ದು ಮಾತ್ರವಲ್ಲ,ಕಾನೂನು ಬಾಹಿರವೂ ಆಗಿತ್ತು. ಅವು ಕೇಬಲ್ ಟೆಲಿವಿಜನ್ ನೆಟ್ವರ್ಕ್ ರೂಲ್ಸ್, 1994ರಡಿ ಕಾರ್ಯಕ್ರಮ ಮತ್ತು ಜಾಹೀರಾತು ಸಂಹಿತೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದವು. ಟಿವಿ ವಾಹಿನಿಗಳಿಗಾಗಿರುವ ಸ್ವಯಂ ನಿಯಂತ್ರಣ ಸಂಸ್ಥೆ ನ್ಯೂಸ್ ಬ್ರಾಡಕಾಸ್ಟರ್ಸ್ ಆ್ಯಂಡ್ ಡಿಜಿಟಲ್ ಅಸೋಸಿಯೇಷನ್ ಹೊರಡಿಸಿದ್ದ ನೀತಿ ಸಂಹಿತೆ ಮತ್ತು ಪ್ರಸಾರ ಮಾನದಂಡಗಳನ್ನೂ ಅವು ಉಲ್ಲಂಘಿಸಿದ್ದವು. ಕರ್ನಾಟಕದ ಹಲವಾರು ವಾಹಿನಿಗಳು ಈ ಸಂಘದ ಸದಸ್ಯರಾಗಿವೆ ಮತ್ತು ಅದರ ನಿಯಮಗಳಿಗೆ ಬದ್ಧವಾಗಿವೆ. ಆದರೆ ಪುನೀತ ಅವರ ಮೃತದೇಹವನ್ನು ತೋರಿಸುವ ಮೂಲಕ ತಾವು ಕಡ್ಡಾಯವಾಗಿ ಅನುಸರಿಸಲೇಬೇಕಾದ ಕಾರ್ಯಕ್ರಮ ಮತ್ತು ಜಾಹಿರಾತು ಸಂಹಿತೆಯನ್ನು ಈ ವಾಹಿನಿಗಳು ಸಂಪೂರ್ಣವಾಗಿ ಉಲ್ಲಂಘಿಸಿದ್ದವು.
ಮನವನ್ನು ಕದಡುವ ದೃಶ್ಯಗಳನ್ನು ಪ್ರಸಾರ ಮಾಡಿದ್ದು ಪುನೀತ್ ಮತ್ತು ಅವರ ಕುಟುಂಬದ ಖಾಸಗಿತನದ ಉಲ್ಲಂಘನೆಯಾಗಿತ್ತು. ವ್ಯಾಪಕ ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾಗಿದ್ದರೆ ಮಾತ್ರ ಓರ್ವ ವ್ಯಕ್ತಿಯ ಖಾಸಗಿತನದ ಹಕ್ಕಿನ ಉಲ್ಲಂಘನೆಗೆ ಅವಕಾಶವಿದೆ. ಆದರೆ ಇಲ್ಲಿ ಅಂತಹ ಹಿತಾಸಕ್ತಿ ಏನಿತ್ತು? ಆಸ್ಪತ್ರೆಯಿಂದ ಮೃತದೇಹದ ಚಿತ್ರಗಳನ್ನು ಪ್ರಸಾರ ಮಾಡುವುದರಿಂದ ದೂರ ಉಳಿಯುವುದೇ ನಿಜವಾದ ಹಿತಾಸಕ್ತಿಯಾಗಿರುತ್ತಿತ್ತು. ಸುದ್ದಿವಾಹಿನಿಗಳ ಮುಖ್ಯಸ್ಥರು ತಮ್ಮ ಪಾತ್ರದ ಬಗ್ಗೆ ನೀತಿ ಸಂಹಿತೆ ಮತ್ತು ಪ್ರಸಾರ ಮಾನದಂಡಗಳು ಏನು ಹೇಳುತ್ತವೆ ಎನ್ನುವುದನ್ನು ಖಂಡಿತ ತಿಳಿದುಕೊಳ್ಳಬೇಕಾಗಿದೆ.
ಮೃತರನ್ನು ಘನತೆಯಿಂದ ನೋಡಬೇಕು ಮತ್ತು ಮೃತದೇಹಗಳ ಚಿತ್ರಗಳನ್ನು ತೋರಿಸಬಾರದು. ಸಂತ್ರಸ್ತರು ಮತ್ತು ಕುಟುಂಬಗಳ ದುಃಖ ಮತ್ತು ಭಾವೋದ್ವೇಗಗಳನ್ನು ತೋರಿಸುವ ಆತಂಕಕಾರಿ ದೃಶ್ಯಗಳು ಮತ್ತು ಗ್ರಾಫಿಕ್ಗಳನ್ನು ಪ್ರಸಾರ ಮಾಡುವಾಗ ಟಿವಿ ವಾಹಿನಿಗಳು ವಿಶೇಷ ಎಚ್ಚರಿಕೆಯನ್ನು ವಹಿಸಬೇಕು ಎಂದು ಈ ನಿಯಮಗಳು ಹೇಳುತ್ತವೆ. ಇನ್ನಾದರೂ ಟಿವಿ ವಾಹಿನಿಗಳು ಹೊಣೆಗಾರಿಕೆಯಿಂದ ನಡೆದುಕೊಳ್ಳುವುದನ್ನು ಕಲಿತುಕೊಳ್ಳಬೇಕು. ಕೇವಲ ಟಿಆರ್ಪಿ ಅಥವಾ ಬ್ರೇಕಿಂಗ್ ನ್ಯೂಸ್ ಮುಖ್ಯವಲ್ಲ. ವಾಹಿನಿಗಳು ಕಾನೂನನ್ನು ಮತ್ತು ತಮ್ಮದೇ ಸ್ವಂತ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತಿರುವುದನ್ನು ವೀಕ್ಷಕರು ಖಂಡಿಸಲು ಇದು ಸಕಾಲವಾಗಿದೆ. ಇಲ್ಲವಾದರೆ ಟಿಆರ್ಪಿಯ ಪೈಪೋಟಿಯಲ್ಲಿ ಪ್ರಚೋದನೆಯನ್ನು ಈ ವಾಹಿನಿಗಳು ಮುಂದುವರಿಸುತ್ತವೆ.







