ಕೋರ್ಟ್ ಆದೇಶದಂತೆ ಮರಣೋತ್ತರ ಪ್ರಶಸ್ತಿಗೆ ಅವಕಾಶವಿಲ್ಲ: ಉಡುಪಿಯಲ್ಲಿ ಸಚಿವ ಸುನೀಲ್ ಕುಮಾರ್ ಹೇಳಿಕೆ
ಪುನೀತ್ ರಾಜ್ ಕುಮಾರ್ ಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವ ಬೇಡಿಕೆ

ಉಡುಪಿ, ನ.1: ಇತ್ತೀಚೆಗೆ ನಿಧನರಾದ ಖ್ಯಾತ ಚಿತ್ರನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂಬ ಬೇಡಿಕೆ ಅನೇಕರಿಂದ ಬಂದಿದ್ದರೂ, ಕೋರ್ಟ್ ಆದೇಶದಂತೆ ಮರಣೋತ್ತರ ಪ್ರಶಸ್ತಿ ನೀಡಲು ಅವಕಾಶವಿಲ್ಲದ ಕಾರಣ ಇದನ್ನು ಪರಿಗಣಿಸಲು ಸಾಧ್ಯವಾಗಿಲ್ಲ ಎಂದು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಉಡುಪಿಯಲ್ಲಿಂದು ಜಿಲ್ಲಾ ಮಟ್ಟದ ರಾಜೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಪುನೀತ್ ನಿಧನ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟ. ರಾಜ್ಯ ಸರಕಾರ ಅವರ ಅಂತ್ಯಕ್ರಿಯೆಯಲ್ಲಿ ತೆಗೆದುಕೊಳ್ಳಬೇಕಾದ ಎಲ್ಲ ಎಚ್ಚರಿಕೆಗಳನ್ನು ತೆಗೆದುಕೊಂಡು ಶ್ರದ್ಧಾಂಜಲಿ ಅರ್ಪಿಸಿದೆ. ಈಗ ಪುನೀತ್ ಅವರಿಗೆ ರಾಜ್ಯೋತ್ಸವ ಕೊಡಬೇಕು ಎಂಬ ಮಾತು ಎಲ್ಲಾ ಕಡೆಗಳಿಂದ ಕೇಳಿ ಬಂದಿದೆ. ಆದರೆ ನಮ್ಮ ನಿಯಮಾವಳಿ ಮತ್ತು ಕೋರ್ಟ್ ಆದೇಶದ ಪ್ರಕಾರ ಮರಣೋತ್ತರ ಪ್ರಶಸ್ತಿಗೆ ಅವಕಾಶವಿಲ್ಲ. ಅವಕಾಶ ಇಲ್ಲದ ಕಾರಣ ಈ ಬೇಡಿಕೆ ಪರಿಗಣಿಸಲು ಸಾಧ್ಯವಾಗಿಲ್ಲ ಎಂದವರು ಹೇಳಿದರು.
ಪುನೀತ್ ರಾಜ್ ಕುಮಾರ್ ಅವರು ಯಾವುದೇ ಶುಲ್ಕ ವಿಧಿಸದೇ ಸರಕಾರಿ ಜಾಹೀರಾತುಗಳಲ್ಲಿ ಪಾಲ್ಗೊಂಡಿರುವುದು ಸೇರಿದಂತೆ ಅವರ ವಿವಿಧ ಸೇವೆಗಳನ್ನು ಪರಿಗಣಿಸಿ ಯಾವ ರೀತಿಯ ಗೌರವ ಕೊಡಬೇಕು ಎಂದು ಸರಕಾರ ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತದೆ. ಈಗಲೇ ಯಾವುದೇ ತರಾತುರಿಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ದೀಪಾವಳಿ ನಂತರ ಸಭೆ ನಡೆಸಿ ಗೌರವ ಸಲ್ಲಿಕೆ ಬಗ್ಗೆ ತೀರ್ಮಾನ ಮಾಡುತ್ತೇವೆ. ಪುನೀತ್‌ಗೆ ವಿಶೇಷ ಗೌರವ ನೀಡಲು ರಾಜ್ಯ ಸರಕಾರ ಖಂಡಿತ ಉತ್ಸುಕವಾಗಿದೆ ಎಂದರು.
ನಾಡಗೀತೆ ಎರಡು ದಿನದಲ್ಲಿ ತೀರ್ಮಾನ: ನಾಡಗೀತೆ ಹಾಡುವ ಕುರಿತಂತೆ ಇರುವ ಗೊಂದಲದ ಬಗ್ಗೆ ಪ್ರಶ್ನಿಸಿದಾಗ, ನಮ್ಮಲ್ಲಿ ಗೊಂದಲ ಏನಿಲ್ಲ. ನಾವು ಬಹಳ ಸ್ಪಷ್ಟವಿದ್ದೇವೆ. ರಾಗ ಸಂಯೋಜನೆ ಮತ್ತು ಕಾಲಮಿತಿಯನ್ನು ನಿಗದಿ ಪಡಿಸಲು ಸಮಿತಿಯನ್ನು ರಚಿಸಿದ್ದು, ಸಮಿತಿ ಶಿಫಾರಸು ಮಾಡಿದೆ. ವರದಿ ಸರಕಾರದ ಬಳಿ ಇದೆ. ಒಂದೆರಡು ದಿನಗಳಲ್ಲಿ ಈ ಬಗ್ಗೆ ಅಂತಿಮ ನಿರ್ಧಾರವನ್ನು ಪ್ರಕಟಿಸಲಾಗುತ್ತೆ ಎಂದರು.
ರಾ.ಶಿಕ್ಷಣ ನೀತಿ: ಯಾರೋ ಅಲ್ಪಬುದ್ಧಿಯವರು ಮಾತ್ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸುತ್ತಾರೆ. ಹೊಸ ನೀತಿಯಲ್ಲಿ ಸಾಮಾನ್ಯ ಹಾಗೂ ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕನ್ನಡ ಭಾಷೆಗೆ ಹೆಚ್ಚಿ ಒತ್ತು ನೀಡಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಅರ್ಧಂಬರ್ಧ ತಿಳಿದವರು ಮಾತ್ರ ಎನ್‌ಇಪಿ ವಿರುದ್ಧ ಮಾತನಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್‌ಗೆ ನಿರಾಶೆಯ ಫಲಿತಾಂಶ: ನಾಳೆಯ ಉಪಚುನಾವಣೆ ಫಲಿತಾಂಶ ಬಿಜೆಪಿ ಪರ ಬರಲಿದೆ ಎಂಬ ನಿಶ್ಚಿತ ನಿರೀಕ್ಷೆಯಲ್ಲಿದ್ದೇವೆ. ಚುನಾವಣಾ ಫಲಿತಾಂಶ ರಾಜ್ಯದ ಜನರಿಗೆ ಆಶಾದಾಯಕವಾಗಲಿದೆ ಮತ್ತು ಕಾಂಗ್ರೆಸ್ ಪಾಲಿಗೆ ನಿರಾಶೆಯ ಫಲಿತಾಂಶ ಆಗಲಿದೆ ಎಂದು ಸಚಿವ ಸುನೀಲ್ ಕುಮಾರ್ ಭವಿಷ್ಯ ನುಡಿದಿದ್ದಾರೆ.
ಉಪಚುನಾವಣೆ ಬಗ್ಗೆ ಡಿ.ಕೆ ಶಿವಕುಮಾರ್ ಇದು ಮುಂದಿನ ಚುನಾವಣೆಯ ದಿಕ್ಸೂಚಿ ಅಲ್ಲ ಎಂದು ಹೇಳುವ ಮೂಲಕ ಪ್ರಾರಂಭದಲ್ಲೇ ಸೋಲನ್ನು ಒಪ್ಪಿಕೊಂಡಿದ್ದಾರೆ. ನಾವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದೇವೆ. ಹಾನಗಲ್ ಮತ್ತು ಸಿಂದಗಿ ಎರಡೂ ಕಡೆ ನಮ್ಮ ಗೆಲುವು ನಿಶ್ಚಿತ. ಮತ್ತು ನಾಳೆಯ ಫಲಿತಾಂಶ ಮುಂದೆ ಬರಲಿರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯ ದಿಕ್ಸೂಚಿಯಾಗಲಿದೆ. ರಾಜ್ಯದ ಜನ ಬೊಮ್ಮಾಯಿ ಅವರ ಮೂರು ತಿಂಗಳ ಹಾಗೂ ಯಡಿಯೂರಪ್ಪ ಅವರ ಎರಡು ವರ್ಷಗಳ ಆಡಳಿತ ಮೆಚ್ಚಿ ಮತ ಹಾಕಿದ್ದು ಎರಡೂ ಕಡೆ ನಮ್ಮ ಪರ ಫಲಿತಾಂಶ ಬರಲಿದೆ ಎಂದು ವಿಶ್ವಾಸದಿಂದ ಹೇಳುತ್ತೇನೆ ಎಂದರು.







