ಹಾನಗಲ್, ಸಿಂದಗಿ ಉಪಚುನಾವಣೆ: ಮಂಗಳವಾರ ಮತ ಎಣಿಕೆ

ಬೆಂಗಳೂರು, ನ. 1: ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ಪೈಪೋಟಿ ಸೃಷ್ಟಿಸಿರುವ ಹಾವೇರಿ ಜಿಲ್ಲೆಯ ಹಾನಗಲ್ ಮತ್ತು ವಿಜಯಪುರ ಜಿಲ್ಲೆಯ ಸಿಂದಗಿ ಕ್ಷೇತ್ರಗಳ ಉಪಚುನಾವಣೆ ಮತ ಎಣಿಕೆ ಕಾರ್ಯವು ನಾಳೆ(ನ.2) ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆಯ ವೇಳೆಗೆ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆಗಳಿವೆ.
ಹಾನಗಲ್ ಕ್ಷೇತ್ರದಲ್ಲಿ ಶೇ.83.72ರಷ್ಟು ಮತ್ತು ಸಿಂದಗಿ ಕ್ಷೇತ್ರದಲ್ಲಿ ಶೇ.69.41ರಷ್ಟು ಮತದಾನವಾಗಿದ್ದು ರಾಜಕೀಯ ಪಕ್ಷಗಳ ಮಧ್ಯೆ ಸೋಲು-ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ. ಈ ನಡುವೆಯೇ ಚುನಾವಣಾ ಆಯೋಗ ಎರಡು ಕ್ಷೇತ್ರಗಳಲ್ಲಿ ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಅಗತ್ಯ ಸಿಬ್ಬಂದಿ ಹಾಗೂ ಸೂಕ್ತ ಭದ್ರತೆಗೆ ಕ್ರಮ ಕೈಕೊಂಡಿದೆ.
ಸಿ.ಎಂ.ಉದಾಸಿ ನಿಧನದಿಂದ ತೆರವಾಗಿರುವ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಿವರಾಜ ಸಜ್ಜನರ್, ಕಾಂಗ್ರೆಸಿನ ಶ್ರೀನಿವಾಸ ಮಾನೆ ಹಾಗೂ ಜೆಡಿಎಸ್‍ನ ನಿಯಾಝ್ ಶೇಖ್ ಸಹಿತ 13 ಮಂದಿ ಕಣದಲ್ಲಿದ್ದರೆ, ಅತ್ತ ಎಂ.ಸಿ.ಮನಗೂಳಿ ನಿಧನದಿಂದ ತೆರವಾದ ಸಿಂದಗಿ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಅಶೋಕ್ ಮನಗೂಳಿ, ಬಿಜೆಪಿಯ ರಮೇಶ್ ಬೂಸನೂರ ಹಾಗೂ ಜೆಡಿಎಸ್‍ನ ನಾಝಿಯಾ ಅಂಗಡಿ ಸೇರಿದಂತೆ 6 ಮಂದಿ ಅಖಾಡದಲ್ಲಿದ್ದು, ನಾಳೆ ಘಟಾನುಘಟಿ ಅಭ್ಯರ್ಥಿಗಳ ಭವಿಷ್ಯ ಬಹಿರಂಗವಾಗಲಿದೆ.
ಹಾನಗಲ್ ಕ್ಷೇತ್ರದ ಮತ ಎಣಿಕೆ ಕಾರ್ಯವು ಹಾವೇರಿ ನಗರದ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದ್ದು, ಸಿಂದಗಿ ಕ್ಷೇತ್ರದ ಮತ ಎಣಿಕೆ ಕಾರ್ಯ ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ಜರುಗಲಿದೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎರಡು ಪ್ರತ್ಯೇಕ ಕೋಣೆಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, 16 ಟೇಬಲ್‍ಗಳಲ್ಲಿ ಒಟ್ಟು 22 ಸುತ್ತು ಮತ ಎಣಿಕೆ ಕಾರ್ಯ ನಡೆಯಲಿದೆ.
ಮತ ಎಣಿಕೆ ಕಾರ್ಯಕ್ಕೆ ಪ್ರತಿ ಟೇಬಲ್‍ಗೆ ತಲಾ ಒಬ್ಬ ಮೈಕ್ರೋ ಅಬ್ಸರ್ವರ್ ಒಬ್ಬ ಮತ ಎಣಿಕೆ ಮೇಲ್ವಿಚಾರಕ, ಒಬ್ಬ ಮತ ಎಣಿಕೆ ಸಹಾಯಕರು ಸೇರಿದಂತೆ ಒಟ್ಟು 60 ಸಿಬ್ಬಂದಿ ನೇಮಿಸಲಾಗಿದ್ದು, ಆರಂಭದಲ್ಲಿ ಅಂಚೆ ಮತಪತ್ರಗಳ ಎಣಿಕೆ ಕಾರ್ಯವು ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ನಡೆಯಲಿದೆ. ಗುರುತಿನ ಚೀಟಿ ಪಾಸ್ ಹೊಂದಿದವರಿಗೆ ಮಾತ್ರ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ನೀಡಲಾಗುತ್ತದೆ.
ಎಣಿಕೆ ಕೇಂದ್ರಕ್ಕೆ ಮೊಬೈಲ್ ಫೆÇೀನ್, ಎಲೆ, ಅಡಿಕೆ, ಗುಟ್ಕಾ, ಪಾನ್‍ಮಸಾಲ, ತಿಂಡಿ-ತಿನಿಸು, ಕುಡಿಯುವ ನೀರು ತೆಗೆದುಕೊಂಡು ಹೋಗಲು ಅವಕಾಶ ಇರುವುದಿಲ್ಲ. ಆಯೋಗದಿಂದ ಪ್ರವೇಶ ಅನುಮತಿ ಹೊಂದಿದ ವಾಹನಗಳಿಗೆ ಮಾತ್ರ ವಾಹನ ನಿಲುಗಡೆಗೆ ಅವಕಾಶವಿರುತ್ತದೆ ಹಾಗೂ ಅಭ್ಯರ್ಥಿಗಳಿಗೆ ಮತ್ತು ಚುನಾವಣಾ ಏಜೆಂಟರುಗಳಿಗೆ ಮಾತ್ರ ನಿಗದಿತ ಸ್ಥಳದಲ್ಲಿ ವಾಹನ ನಿಲುಗಡೆಗೆ ಅವಕಾಶ ಇರುತ್ತದೆ ಎಂದು ಹೇಳಿದರು.
ಇವಿಎಂ ಮತಯಂತ್ರಗಳ ಎಣಿಕೆ ಕೊನೆ ಸುತ್ತಿನ ನಂತರ 5 ವಿವಿಪ್ಯಾಟ್ ಮತಯಂತ್ರಗಳಲ್ಲಿ ವಿವಿಪ್ಯಾಟ್ ಸ್ಲೀಪ್‍ಗಳನ್ನು ಎಣಿಕೆ ತಾಳೆ ಮಾಡಲಾಗುತ್ತದೆ. ನಿಗದಿತ ಮತ ಎಣಿಕೆ ಟೇಬಲ್‍ಗೆ ನಿಗದಿತ ಏಜೆಂಟ್ ಇರಬೇಕು. ಬೇರೆ ಟೇಬಲ್‍ಗೆ ಹೋಗಿಬರಲು ಅವಕಾಶವಿರುವುದಿಲ್ಲ. ಈಗಾಗಲೇ ಚುನಾವಣಾ ಅಧಿಕಾರಿಗಳು ಭಾವಚಿತ್ರವಿರುವ ಗುರುತಿನ ಚೀಟಿ ನೀಡಿದ್ದು, ಅದರಂತೆ ಏಜೆಂಟರು ಎಣಿಕೆ ಕೊಠಡಿಯಲ್ಲಿ ಬೆಳಗ್ಗೆ 7.30ಕ್ಕೆ ಹಾಜರಿರಬೇಕೆಂದು ಸೂಚಿಸಲಾಗಿದೆ.
ಮತ ಎಣಿಕೆ ಕೇಂದ್ರದ ಒಳಗೆ ಮತ್ತು ಹೊರಗೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಿದ್ದು, ಮುನ್ನಚ್ಚರಿಕೆ ಕ್ರಮವಾಗಿ ಮತ ಎಣಿಕೆ ಕೇಂದ್ರದ ಸುತ್ತಮುತ್ತಲಿನ 100 ಮೀ.ವ್ಯಾಪ್ತಿಯಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಸುಗಮ ಮತ ಎಣಿಕೆ ಎಲ್ಲ ಕ್ರಮ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಗೆಲವು' ಪ್ರತಿಷ್ಠೆ: ಎರಡೂ ಕ್ಷೇತ್ರಗಳ ಉಪಚುನಾವಣೆಯ ಗೆಲುವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರತಿಷ್ಠೆಯಾಗಿದ್ದರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿಗೆ ತಮ್ಮ ಅಸ್ತಿತ್ವದ ಉಳಿವಿನ ಪ್ರಶ್ನೆಯಾಗಿದೆ. ಹೀಗಾಗಿ ಈ ಉಪಚುನಾವಣೆ ರಾಜಕೀಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದೆ.







