ಸಾಯುವವರೆಗೂ ಹೋರಾಡಲು ಸಿದ್ಧ ಎಂದಿದ್ದ ಅಶ್ರಫ್ ಘನಿ ಮರುದಿನವೇ ದೇಶದಿಂದ ಪಲಾಯನ ಮಾಡಿದರು: ಅಮೆರಿಕ

ವಾಷಿಂಗ್ಟನ್, ನ.1: ಸಾಯುವವರೆಗೂ ಹೋರಾಡಲು ಸಿದ್ಧ ಎಂದು ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದರು. ಆದರೆ ಮರುದಿನವವೇ ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್ ಹೇಳಿದ್ದಾರೆ.
ಅಮೆರಿಕದ ಟಿವಿ ಚಾನೆಲ್ ಸಿಬಿಎಸ್‌ನಲ್ಲಿ ಪ್ರಸಾರವಾದ ‘ಫೇಸ್ ದಿ ನೇಷನ್’ ಕಾರ್ಯಕ್ರಮದಲ್ಲಿ ಬ್ಲಿಂಕೆನ್ ಈ ಹೇಳಿಕೆ ನೀಡಿದ್ದಾರೆ. ಅಕ್ಟೋಬರ್ 24ರಂದು ಇದೇ ಟಿವಿ ಚಾನೆಲ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಫ್ಘಾನ್‌ಗೆ ಅಮೆರಿಕದ ಮಾಜಿ ರಾಯಭಾರಿ ಝಲ್‌ಮೆ ಖಲಿಝಾದ್ ‘ ತಾಲಿಬಾನ್‌ನೊಂದಿಗೆ ಅಧಿಕಾರ ಹಂಚಿಕೊಳ್ಳುವ ವಿಷಯದಲ್ಲಿ ಅಮೆರಿಕ ಅಶ್ರಫ್ ಘನಿ ಮೇಲೆ ಸಾಕಷ್ಟು ಒತ್ತಡ ಹೇರಿಲ್ಲ . ಈಗ ಆ ಬಗ್ಗೆ ಪುನರಾವಲೋಕನ ನಡೆಸಿದಾಗ , ನಾವು ಇನ್ನಷ್ಟು ತೀವ್ರ ಒತ್ತಡ ಹೇರಬಹುದಿತ್ತು ಎಂದನಿಸುತ್ತದೆ ’ ಎಂದಿದ್ದರು.
ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಬ್ಲಿಂಕೆನ್ ‘ ಅಫ್ಘಾನ್‌ನಲ್ಲಿ ತಾಲಿಬಾನ್ ನೇತೃತ್ವದ, ಆದರೆ ಎಲ್ಲರನ್ನೂ ಒಳಗೊಂಡ ನೂತನ ಸರಕಾರಕ್ಕೆ ಅಧಿಕಾರ ಹಸ್ತಾಂತರಿಸುವ ನಮ್ಮ ಪ್ರಯತ್ನಕ್ಕೆ ಘನಿಯ ಒಪ್ಪಿಗೆ ಇದೆಯೇ ಎಂದು ದೃಢಪಡಿಸಲು ಅವರಿಗೆ ಫೋನ್ ಕರೆ ಮಾಡಿದ್ದೆ. ಇದಕ್ಕೆ ತಾನು ಸಿದ್ಧನಾಗಿದ್ದೇನೆ. ಆದರೆ ಒಂದು ವೇಳೆ ತಾಲಿಬಾನ್ ಈ ಒಪ್ಪಂದ ಉಲ್ಲಂಘಿಸಿದರೆ ಸಾಯುವವರೆಗೂ ಯುದ್ಧಕ್ಕೆ ಸಿದ್ಧ ಎಂದಿದ್ದರು. ಆದರೆ ಹೀಗೆ ಹೇಳಿದ ಮರುದಿನವೇ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ಅಧ್ಯಕ್ಷ ಘನಿಯೊಂದಿಗೆ ಹಲವು ವಾರ, ತಿಂಗಳುಗಳಿಂದಲೂ ನಿರಂತರ ಸಂಪರ್ಕದಲ್ಲಿದ್ದೆ’ ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದಿಂದ ಅಮೆರಿಕ ನೇತೃತ್ವದ ವಿದೇಶ ಪಡೆಗಳು ವಾಪಸಾಗುವ ಪ್ರಕ್ರಿಯೆ ಆರಂಭಿಸುತ್ತಿದ್ದಂತೆಯೇ ತಾಲಿಬಾನ್ ಪಡೆ ಕಾಬೂಲ್‌ನತ್ತ ಮುನ್ನುಗ್ಗಿ ಬಂದಿತ್ತು. ಆಗ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ಆಗಸ್ಟ್ 15ರಂದು ದೇಶದಿಂದ ಪಲಾಯನ ಮಾಡಿದ್ದರು.







