2022ರ ಹಜ್ ಗೆ ಆನ್ ಲೈನ್ ಅರ್ಜಿ ಪ್ರಕ್ರಿಯೆ ಆರಂಭ: ಹೆಚ್ಚಿನ ಸೌಲಭ್ಯಗಳನ್ನು ಪ್ರಕಟಿಸಿದ ಕೇಂದ್ರ ಸಚಿವ ನಖ್ವಿ
ಮುಂಬೈ,ನ.1: 2022ರ ಹಜ್ ಯಾತ್ರೆಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಸೋಮವಾರ ಚಾಲನೆ ನೀಡಲಾಗಿದ್ದು,ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಯಾತ್ರೆಗಾಗಿ ಮಹತ್ವದ ಸುಧಾರಣೆಗಳು ಮತ್ತು ಹೆಚ್ಚಿನ ಸೌಲಭ್ಯಗಳನ್ನು ಪ್ರಕಟಿಸಿದರು.
ದಕ್ಷಿಣ ಮುಂಬೈನ ಹಜ್ ಹೌಸ್‌ನಲ್ಲಿ 2022ರ ಹಜ್ ಯಾತ್ರೆಯನ್ನು ಪ್ರಕಟಿಸಿದ ನಖ್ವಿ,ಸಂಪೂರ್ಣ ಹಜ್ ಪ್ರಕ್ರಿಯೆಯು ಶೇ.100ರಷ್ಟು ಡಿಜಿಟಲ್/ಆನ್‌ಲೈನ್ ಆಗಿರಲಿದೆ ಎಂದು ತಿಳಿಸಿದರು.
2022ರ ಹಜ್ ಯಾತ್ರೆಗೆ ಅರ್ಜಿಗಳನ್ನು ಸಲ್ಲಿಸಲು 2022,ಜನವರಿ 31 ಕೊನೆಯ ದಿನಾಂಕವಾಗಿದೆ. ಜನರು ಹಜ್ ಮೊಬೈಲ್ ಆ್ಯಪ್ ಮೂಲಕವೂ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಭಾರತೀಯ ಹಜ್ ಯಾತ್ರಿಗಳು ಸ್ವದೇಶಿ ಉತ್ಪನ್ನಗಳೊಂದಿಗೆ ತೆರಳುವ ಮೂಲಕ ‘ವೋಕಲ್ ಫಾರ್ ಲೋಕಲ್’ಅನ್ನು ಉತ್ತೇಜಿಸಲಿದ್ದಾರೆ ಎಂದು ನಖ್ವಿ ತಿಳಿಸಿದರು. ಹಜ್ ಯಾತ್ರಿಗಳು ಬೆಡ್‌ಶೀಟ್,ತಲೆದಿಂಬು, ಟವೆಲ್,ಕೊಡೆ ಇತ್ಯಾದಿಗಳನ್ನು ಸೌದಿ ಅರೇಬಿಯದಲ್ಲಿ ವಿದೇಶಿ ವಿನಿಮಯವನ್ನು ತೆತ್ತು ಖರೀದಿಸುತ್ತಿದ್ದರು,ಆದರೆ ಈ ಸಲ ಹೆಚ್ಚಿನ ಈ ವಸ್ತುಗಳನ್ನು ಅವರು ಭಾರತೀಯ ಕರೆನ್ಸಿಯನ್ನು ನೀಡಿ ಭಾರತದಲ್ಲಿಯೇ ಖರೀದಿಸಲಿದ್ದಾರೆ. ಸೌದಿ ಅರೇಬಿಯಾಕ್ಕೆ ಹೋಲಿಸಿದರೆ ಭಾರತದಲ್ಲಿ ಈ ವಸ್ತುಗಳು ಹೆಚ್ಚುಕಡಿಮೆ ಶೇ.50ರಷ್ಟು ಅಗ್ಗದ ದರಗಳಲ್ಲಿ ಲಭ್ಯವಿದ್ದು, ಅವರು ಭಾರತದಿಂದ ನಿರ್ಗಮಿಸುವ ತಾಣಗಳಲ್ಲಿ ಇವುಗಳನ್ನು ಅವರಿಗೆ ಹಸ್ತಾಂತರಿಸಲಾಗುವುದು.
ಭಾರತವು ಪ್ರತಿ ವರ್ಷ ಎರಡು ಲಕ್ಷ ಹಜ್ ಯಾತ್ರಿಗಳನ್ನು ಕಳುಹಿಸುತ್ತಿದ್ದು,ಈ ವ್ಯವಸ್ಥೆಯಿಂದಾಗಿ ಭಾರತೀಯ ಹಜ್ ಯಾತ್ರಿಗಳ ಕೋಟ್ಯಂತರ ರೂ.ಉಳಿತಾಯವಾಗಲಿದೆ ಎಂದ ನಖ್ವಿ,ಯಾತ್ರಿಗಳ ಆಯ್ಕೆಯನ್ನು ಭಾರತ ಮತ್ತು ಸೌದಿ ಅರೇಬಿಯ ಸರಕಾರಗಳು ನಿರ್ಧರಿಸುವ ಕೊರೋನ ವೈರಸ್ ಶಿಷ್ಟಾಚಾರಗಳು ಮತ್ತು ನಿಯಮಗಳಂತೆ ನಡೆಸಲಾಗುವುದು ಎಂದು ತಿಳಿಸಿದರು.
2022ರ ಹಜ್ ಯಾತ್ರೆಗಾಗಿ ನಿರ್ಗಮನ ತಾಣಗಳ ಸಂಖ್ಯೆಯನ್ನು 21ರಿಂದ 10ಕ್ಕೆ ಇಳಿಸಲಾಗಿದ್ದು, ಅಹ್ಮದಾಬಾದ್, ಬೆಂಗಳೂರು, ಕೊಚ್ಚಿನ್,ದಿಲ್ಲಿ,ಗುವಾಹಟಿ,ಹೈದರಾಬಾದ್,ಕೋಲ್ಕತಾ,ಲಕ್ನೋ,ಮುಂಬೈ ಮತ್ತು ಶ್ರೀನಗರ ಇವುಗಳಲ್ಲಿ ಸೇರಿವೆ. 2020 ಮತ್ತು 2021ರ ಹಜ್ ಯಾತ್ರೆಗಾಗಿ 3000ಕ್ಕೂ ಅಧಿಕ ಮಹಿಳೆಯರು ಪುರುಷ ಸಂಗಾತಿ ರಹಿತ ವರ್ಗದಡಿ ಅರ್ಜಿಗಳನ್ನು ಸಲ್ಲಿಸಿದ್ದು,ಅವು 2022ರ ಹಜ್‌ಗೂ ಅರ್ಹವಾಗಿವೆ. 2022ರ ಹಜ್‌ಗಾಗಿ ಇತರ ಮಹಿಳೆಯರೂ ಈ ವರ್ಗದಡಿ ಅರ್ಜಿಗಳನ್ನು ಸಲ್ಲಿಸಬಹುದು ಮತ್ತು ಅವರಿಗೆ ಲಾಟರಿ ವ್ಯವಸ್ಥೆಯಿಂದ ವಿನಾಯಿತಿ ನೀಡಲಾಗುವುದು ಎಂದು ನಖ್ವಿ ತಿಳಿಸಿದರು.