ಟಿ20 ಕ್ರಿಕೆಟ್ ವಿಶ್ವಕಪ್: ಪಾಕಿಸ್ತಾನ ಪರ ಹೇಳಿಕೆ ನೀಡಿದ ಆರೋಪ : ಮಧ್ಯಪ್ರದೇಶದ ಯುವಕನ ಬಂಧನ

ಭೋಪಾಲ್, ನ. 1: ಟಿ20 ಕ್ರಿಕೆಟ್ ವಿಶ್ವಕಪ್ನಲ್ಲಿ ಇತ್ತೀಚೆಗೆ ಭಾರತದ ವಿರುದ್ಧ ಪಾಕಿಸ್ತಾನ ಜಯ ಗಳಿಸಿದ ಬಳಿಕ ಪಾಕಿಸ್ತಾನ ಪರ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ದೇಶದ್ರೋಹದ ಆರೋಪ ಎದುರಿಸುತ್ತಿರುವ ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯ 23 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ (ವಿಎಚ್ಪಿ)ನ ಸಾತ್ನಾ ಜಿಲ್ಲೆಯ ಕಾರ್ಯದರ್ಶಿ ಅನುರಾಗ್ ಮಿಶ್ರಾ ಹಾಗೂ ಇತರರು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಮೈಹಾರ್ ಪೊಲೀಸ್ ಠಾಣೆಯ ಪೊಲೀಸರು ರವಿವಾರ ರಾತ್ರಿ ಈ ಯುವಕನ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ‘‘ಯುವಕನನ್ನು 23ರ ಹರೆಯದ ಮುಹಮ್ಮದ್ ಫಾರೂಕ್ ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಲಾಗಿದೆ’’ ಎಂದು ಮೈಹಾರ್ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಹಿಮಾಲಿ ಸೋನಿ ಅವರು ತಿಳಿಸಿದ್ದಾರೆ.
ಬಂಧಿಸಿದ ಬಳಿಕ ಮುಹಮ್ಮದ್ ಫಾರೂಕ್ನನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಸೋಮವಾರ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಆತನಿಗೆ ರಿಮಾಂಡ್ ವಿಧಿಸಿದೆ ಎಂದು ಅವರು ತಿಳಿಸಿದ್ದಾರೆ. ಎಫ್ಐಆರ್ ಪ್ರಕಾರ ಟಿ20 ಕ್ರಿಕೆಟ್ ವಿಶ್ವಕಪ್ನಲ್ಲಿ ಅಕ್ಟೋಬರ್ 24ರಂದು ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಜಯ ಗಳಿಸಿದ ಬಳಿಕ ಸಾಹಿಲ್ ಖಾನ್ ಎಂದು ಗುರುತಿಸಲಾದ ಇನ್ನೋರ್ವ ಫೇಸ್ಬುಕ್ ಬಳಕೆದಾರರ ಗೋಡೆಯಲ್ಲಿ ‘‘ಪಾಕಿಸ್ತಾನ ಜಿಂದಾಬಾದ್’’ ಹಾಗೂ ‘‘ಬಾಬರ್ ಅಝಮ್ ಜಿಂದಾಬಾದ್’’ ಎಂಬ ಹೇಳಿಕೆಯನ್ನು ಫಾರೂಕ್ ಪೋಸ್ಟ್ ಮಾಡಿದ್ದ ಎಂದು ಹೇಳಲಾಗಿದೆ. ಪಾಕಿಸ್ತಾನ ಮ್ಯಾಚ್ನಲ್ಲಿ ಜಯ ಗಳಿಸಿದರೆ, ಭಾರತ ನಮ್ಮ ಹೃದಯ ಗೆದ್ದಿದೆ ಎಂದು ಎರಡೂ ತಂಡಗಳ ಕ್ಯಾಪ್ಟನ್ಗಳ ಭಾವಚಿತ್ರವನ್ನು ಸಾಹಿಲ್ ಖಾನ್ ಪೋಸ್ಟ್ ಮಾಡಿದ್ದರು. ಅನಂತರ ಫಾರೂಕ್ ಈ ಹೇಳಿಕೆ ನೀಡಿದ್ದ ಎಂದು ದೂರನ್ನು ಉಲ್ಲೇಖಿಸಿ ಎಫ್ಐಆರ್ ಹೇಳಿದೆ.







