ಜನನ, ಮರಣಗಳ ರಾಷ್ಟ್ರೀಯ ದತ್ತಾಂಶ ಸಂಚಯದ ಕೇಂದ್ರ ಪ್ರಸ್ತಾವಕ್ಕೆ ಸಿಪಿಎಂ, ಎಐಎಂಐಎಂ ವಿರೋಧ

ಸಾಂದರ್ಭಿಕ ಚಿತ್ರ:PTI
ಹೊಸದಿಲ್ಲಿ,ನ.1: ರಾಷ್ಟ್ರೀಯ ಮಟ್ಟದಲ್ಲಿ ಜನನ ಮತ್ತು ಮರಣ ನೋಂದಣಿಯ ದತ್ತಾಂಶ ಸಂಚಯವನ್ನು ಪರಿಷ್ಕರಿಸುವ ಕೇಂದ್ರದ ನಡೆಯನ್ನು ಸಿಪಿಎಂ ಮತ್ತು ಆಲ್ ಇಂಡಿಯಾ ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪ್ರತಿಭಟಿಸಿವೆ.
ಸರಕಾರದ ನಡೆಯನ್ನು ‘ಅನಗತ್ಯ’ಎಂದು ಬಣ್ಣಿಸಿರುವ ಸಿಪಿಎಂ,ಇದು ಎನ್ಆರ್ಸಿಗಾಗಿ ದತ್ತಾಂಶ ಸಂಚಯವನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸಿದೆ.
ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್(ಎನ್ಪಿಆರ್) ಪರಿಷ್ಕರಣೆ ಪ್ರಕ್ರಿಯೆಗೆ ಸಹಕರಿಸದಂತೆ ಮತ್ತು ನಿಜವಾದ ಗಣತಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಮಾತ್ರ ಉತ್ತರಿಸುವಂತೆ ಸಿಪಿಎಂ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಜನರಿಗೆ ಕರೆ ನೀಡಿದೆ.
ಎನ್ಪಿಆರ್ ನಿಯಮಗಳನ್ನು ಉಲ್ಲೇಖಿಸಿರುವ ಸಿಪಿಎಂ,ಎನ್ಪಿಆರ್ ದೃಢೀಕರಣದ ಬಳಿಕ ಎನ್ಆರ್ಸಿಯನ್ನು ಅಂತಿಮಗೊಳಿಸಲಾಗುತ್ತದೆ ಎಂದು ಈ ನಿಯಮಗಳು ಸ್ಪಷ್ಟವಾಗಿ ಹೇಳುತ್ತವೆ ಮತ್ತು ಗೃಹ ಸಚಿವಾಲಯದ ಮಾತುಗಳಲ್ಲಿ ಎನ್ಪಿಆರ್ ಎನ್ಆರ್ಸಿಯ ಮೊದಲ ಹಂತವಾಗಿದೆ. ರಾಜ್ಯ ಸರಕಾರಗಳ ಸಿಬ್ಬಂದಿಗಳು ಎನ್ಪಿಆರ್ ಪರಿಸ್ಕರಣೆಯನ್ನು ನಡೆಸಬೇಕಾಗುತ್ತದೆ. ಕೇರಳದಂತೆ ಸಂಬಂಧಿಸಿದ ರಾಜ್ಯವು ಜನಗಣತಿಗೆ ಮಾತ್ರ ಅನುಕೂಲ ಕಲ್ಪಿಸಬೇಕೇ ಹೊರತು ಎನ್ಪಿಆರ್ ಪರಿಷ್ಕರಣೆಗಲ್ಲ ಎಂದು ಹೇಳಿದೆ.
ಸಿಪಿಎಂ ಪ್ರ.ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರೂ ಜನನ ಮತ್ತು ಮರಣಗಳ ದತ್ತಾಂಶ ಸಂಚಯದ ಕೇಂದ್ರೀಕರಣ ಅನಗತ್ಯವಾಗಿದೆ. ಇವುಗಳ ನೋಂದಣಿ ಪ್ರಕ್ರಿಯೆ ರಾಜ್ಯಗಳ ಬಳಿಯೇ ಉಳಿಯಬೇಕು ಎಂದಿದ್ದಾರೆ.
ಇದೇ ಭಾವನೆಯನ್ನು ಪ್ರತಿಧ್ವನಿಸಿರುವ ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿ ಅವರು ಜನನ ಮತ್ತು ಮರಣಗಳ ದತ್ತಾಂಶ ಸಂಚಯದ ಪರಿಷ್ಕರಣೆಯ ಉದ್ದೇಶದ ಬಗ್ಗೆ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. 1969ರ ಜನನ ಮತ್ತು ಮರಣಗಳ ನೋಂದಣಿ ಕಾಯ್ದೆಯನ್ನು ತಿದ್ದುಪಡಿಗೊಳಿಸಲು ಸರಕಾರವು ಬಯಸಿದೆ. ಈ ತಿದ್ದುಪಡಿಯು ಸರಕಾರಕ್ಕೆ ಎಲ್ಲ ನೋಂದಾಯಿತ ಜನನಗಳು ಮತ್ತು ಮರಣಗಳ ಏಕೀಕೃತ ದತ್ತಾಂಶ ಸಂಚಯವನ್ನು ಸೃಷ್ಟಿಸಲು ಅವಕಾಶವನ್ನು ನೀಡಲಿದೆ. ಪ್ರಸಕ್ತ ಈ ಕಾರ್ಯವನ್ನು ರಾಜ್ಯಗಳು ಮಾಡುತ್ತಿವೆ,ಆದರೆ ಇನ್ನು ಮುಂದೆ ದತ್ತಾಂಶಗಳನ್ನು ಸಂಗ್ರಹಿಸಲು ಕೇಂದ್ರಕ್ಕೆ ಅವಕಾಶ ದೊರೆಯಲಿದೆ ಎಂದಿರುವ ಅವರು,ಕೇಂದ್ರವೇಕೆ ಇದನ್ನು ರಾಜ್ಯಗಳ ಅಧಿಕಾರ ವ್ಯಾಪ್ತಿಯಿಂದ ಕಿತ್ತುಕೊಳ್ಳುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಐದು ವರ್ಷದೊಳಗಿನ ಶೇ.38ರಷ್ಟು ಮಕ್ಕಳು ಜನನ ಪ್ರಮಾಣಪತ್ರ ಹೊಂದಿಲ್ಲ. ಅವರಲ್ಲಿಯೂ ಜನನಗಳ ನೋಂದಣಿ ಮಾಡಿಸಿದವರ ಪೈಕಿ ಕೆಲವರಲ್ಲಿ ಈಗಲೂ ಜನನ ಪ್ರಮಾಣಪತ್ರಗಳಿಲ್ಲ. ಅದಕ್ಕೂ ಮುನ್ನ ಜನಿಸಿದವರ ಬಳಿ ಜನನ ಪ್ರಮಾಣಪತ್ರಗಳು ಇರುವ ಸಾಧ್ಯತೆಯು ಇನ್ನೂ ಕಡಿಮೆ,ಏಕೆಂದರೆ ಅವರು ಆಸ್ಪತ್ರೆಗಳಲ್ಲಿ ಜನಿಸಿರಲಿಲ್ಲ ಎಂದಿರುವ ಉವೈಸಿ,ಶ್ರೀಮಂತ ವರ್ಗದ ಐದು ವರ್ಷಕ್ಕಿಂತ ಕೆಳಗಿನ ಸುಮಾರು ಶೆ.82.3ರಷ್ಟು ಮಕ್ಕಳು ತಮ್ಮ ಜನನಗಳನ್ನು ನೊಂದಾಯಿಸಿಕೊಂಡಿದ್ದಾರೆ ಮತ್ತು ಜನನ ಪ್ರಮಾಣಪತ್ರಗಳನ್ನು ಹೊಂದಿದ್ದಾರೆ,ಆದರೆ ಬಡವರ್ಗದಲ್ಲಿ ಅಂತಹ ಮಕ್ಕಳ ಸಂಖ್ಯೆ ಕೇವಲ ಶೇ.40.7ರಷ್ಟಿದೆ ಎಂದಿದ್ದಾರೆ.
ಸರಕಾರದ ಉದ್ದೇಶಿತ ಕ್ರಮದಿಂದಾಗಿ ಅಲ್ಪಸಂಖ್ಯಾತರು, ಎಸ್ಸಿ-ಎಸ್ಟಿಗಳು ಮತ್ತು ಒಬಿಸಿಗಳ ಪೈಕಿ ಹೆಚ್ಚಿನವರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.