ವಕೀಲರ ಕಾಯ್ದೆ ಜಾರಿಗೆ ವಕೀಲ ಎ.ಪಿ.ರಂಗನಾಥ್‍ರಿಂದ ಸಿಎಂಗೆ ಮನವಿ
ಬೆಂಗಳೂರು, ನ.1: ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಅವರು ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಅಡ್ವೊಕೇಟ್ಸ್ ಡೈರೆಕ್ಟರಿ-2021 ನೀಡುವ ಮೂಲಕ ವಕೀಲರ ರಕ್ಷಣಾ ಕಾಯ್ದೆ ಜಾರಿ ಕುರಿತು ನೆನಪು ಮಾಡಿದರು.
ಎಎಬಿ ಅಧ್ಯಕ್ಷ ಎಪಿ ರಂಗನಾಥ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಅಡ್ವೊಕೇಟ್ಸ್ ಡೈರೆಕ್ಟರಿ-2021 ನೀಡಿದರು. ಈ ವೇಳೆ ಸಿಎಂ ಹಿಂದೆ ನೀಡಿದ್ದ ಆಶ್ವಾಸನೆಯಂತೆ ವಕೀಲ ಸಂಘದ ಪ್ರಮುಖ ಬೇಡಿಕೆಯಾದ ವಕೀಲರ ರಕ್ಷಣಾ ಕಾಯ್ದೆಯನ್ನು ಹಾಗೂ ವಕೀಲರ ವಿಮಾ ಯೋಜನೆಯನ್ನು ಶೀಘ್ರವಾಗಿ ಜಾರಿಗೆ ತರುವ ವಿಚಾರವನ್ನು ನೆನಪು ಮಾಡಿಕೊಟ್ಟರಲ್ಲದೇ, ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದರು.
ನ್ಯಾಯಮೂರ್ತಿಗಳ ಸನ್ಮಾನ ಸಮಾರಂಭಕ್ಕೆ ಆಹ್ವಾನ: ರಾಜ್ಯ ಹೈಕೋರ್ಟ್‍ನಲ್ಲಿ ಕಾರ್ಯನಿರ್ವಹಿಸಿ ಇತ್ತೀಚೆಗೆ ವಿವಿಧ ಹೈಕೋರ್ಟ್‍ಗಳಿಗೆ ಮುಖ್ಯ ನ್ಯಾಯಮೂರ್ತಿಗಳಾಗಿ ವರ್ಗಾವಣೆಯಾಗಿರುವ ನ್ಯಾ. ರವಿ ಮಳೀಮಠ್, ನ್ಯಾ. ಸತೀಶ್ ಚಂದ್ರ ಶರ್ಮಾ, ನ್ಯಾ. ಅರವಿಂದ ಕುಮಾರ್ ಅವರಿಗೆ ಸನ್ಮಾನಿಸಲು ವಕೀಲರ ಸಂಘ ನವೆಂಬರ್ 12 ರಂದು ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸುವಂತೆ ಮುಖ್ಯಮಂತ್ರಿಗಳನ್ನು ಆಮಂತ್ರಿಸಲಾಯಿತು.
ನ್ಯಾಯಮೂರ್ತಿಗಳು, ಹಿರಿಯ ವಕೀಲರು, ವಕೀಲರ ಸಂಘಗಳ ಪದಾಧಿಕಾರಿಗಳು ಹಾಗೂ ಎಲ್ಲ ವಕೀಲರ ವಿಳಾಸ, ಫೋನ್ ನಂಬರ್ ಮತ್ತಿತರೆ ಮಾಹಿತಿ ಒಳಗೊಂಡ ಅಡ್ವೊಕೇಟ್ಸ್ ಡೈರೆಕ್ಟರಿ-2021 ನ್ನು ಬೆಂಗಳೂರು ವಕೀಲರ ಸಂಘ ಕಳೆದ ಶುಕ್ರವಾರ (ಅ.29) ಬಿಡುಗಡೆ ಮಾಡಿದೆ.







