ಸ್ಥಳೀಯ ಭಾಷೆ ಕಲಿಕೆಗೆ ರಾಷ್ಟ್ರೀಯ ಶಿಕ್ಷಣ ನೀತಿ ಪೂರಕ: ಡಾ.ಸಿ.ಎನ್.ಅಶ್ವತ್ಥ ನಾರಾಯಣ

ರಾಮನಗರ, ನ.1: ರಾಷ್ಟ್ರೀಯ ಶಿಕ್ಷಣ ನೀತಿ ಸ್ಥಳೀಯ ಭಾಷೆಗೆ ಆದ್ಯತೆ ನೀಡಿ ಗುಣಮಟ್ಟದ ಶಿಕ್ಷಣ ನೀಡುತ್ತದೆ ಎಂದು ಉನ್ನತ ಶಿಕ್ಷಣ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯ ಅಭಿವೃಧ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.
ಸೋಮವಾರ ಜಿಲ್ಲಾ ಕ್ರೀಡಾಂಗಣದಲ್ಲಿ 66ನೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದ ನಂತರ ಮಾತನಾಡಿದ ಅವರು, ಸ್ಥಳೀಯ ಭಾಷೆ ಕಲಿಕೆಯ ಶಕ್ತಿ ಎಂಬ ಪರಿಕಲ್ಪನೆಯಲ್ಲಿ ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಸರಕಾರ ಆದ್ಯತೆ ನೀಡಿದೆ. ವೃತ್ತಿಪರ ಕೋರ್ಸ್‍ಗಳಾದ 4 ಇಂಜಿನಿಯರಿಂಗ್ ಕಾಲೇಜುಗಳನ್ನು ಕನ್ನಡ ಮಾಧ್ಯಮದಲ್ಲಿ ಪ್ರಾರಂಭಿಸಿದೆ ಎಂದರು.
‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕಾಗಿ ಕಾರ್ಯಪಡೆ ರಚಿಸಿ ಅನುಷ್ಠಾನಗೊಳಿಸುತ್ತಿರುವ ದೇಶದ ಮೊಟ್ಟ ಮೊದಲ ರಾಜ್ಯ ಕರ್ನಾಟಕ. ಸರಕಾರಿ ಕಾಲೇಜುಗಳ ವಿದ್ಯಾರ್ಥಿಗಳ ಕಲಿಕೆ ಆನ್‍ಲೈನ್ ಮೂಲಕ ಮುಂದುವರಿಸಲು ಸರಕಾರ 1.10 ಲಕ್ಷ ಲ್ಯಾಪ್‍ಟಾಪ್ ಮತ್ತು 1.55 ಲಕ್ಷ ಟ್ಯಾಬ್ಲೆಟ್‍ಗಳನ್ನು ವಿತರಿಸಿದೆ ಎಂದು ಅಶ್ವತ್ಥ ನಾರಾಯಣ ಹೇಳಿದರು.
ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಸಹಭಾಗಿತ್ವದಲ್ಲಿ ರಾಜ್ಯದ 150 ಸರಕಾರಿ ಐಟಿಐಗಳನ್ನು ಇಂಡಸ್ಟ್ರಿ 4.0 ರಡಿ ಅಂತರ್‍ರಾಷ್ಟ್ರೀಯ ಮಟ್ಟಕ್ಕೆ ಮೆಲ್ದರ್ಜೆಗೇರಿಸಲಾಗುತ್ತಿದೆ. ರಾಮನಗರದಲ್ಲಿ ಸ್ಕಿಲ್ ಹಬ್ ಹಾಗೂ ಮಾಗಡಿ ತಾಲೂಕಿನ ಚಿಕ್ಕಕಲ್ಯದಲ್ಲಿ 60 ಕೋಟಿ ರೂ.ವೆಚ್ಚದಲ್ಲಿ ಜಿ.ಟಿ.ಟಿ.ಸಿ ಕಾಲೇಜು ಪ್ರಾರಂಭಿಸಲಾಗಿದೆ ಅವರು ಎಂದರು.
ವಿಶ್ವದಲ್ಲೇ ತಂತ್ರಜ್ಞಾನದ ಕೌಶಲ್ಯದಲ್ಲಿ ಕರ್ನಾಟಕ 23ನೇ ಸ್ಥಾನದಲ್ಲಿದೆ. ಎಜೂಟೆಕ್, ಮೆಡಿಟೆಕ್, ಅಗ್ರಿಟೆಕ್ ಇವುಗಳ ಲಾಭವನ್ನು ಎಲ್ಲರೂ ಪಡೆಯಬೇಕು. ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಭಿವೃದ್ಧಿ ಪಡಿಸಿರುವ ‘ಮಹಿಳಾ ಉದ್ದಿಮೆಗಳ ಪಾರ್ಕ್’ನಲ್ಲಿ 100 ಕ್ಕೂ ಹೆಚ್ಚು ಉದ್ದಿಮೆದಾರರು ಘಟಕ ಪ್ರಾರಂಭಿಸಲಿದ್ದಾರೆ. ಕರ್ನಾಟಕ ಮುದ್ರಣಕಾರರ ಸಂಘದ ವತಿಯಿಂದ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗುವ ಪ್ರಿಂಟೆಕ್ ಕ್ಲಸ್ಟರ್‍ನಲ್ಲಿ 89 ಪ್ರಿಂಟಿಂಗ್ ಉದ್ಯಮಗಳಿಗೆ ಹಂಚಿಕೆ ಮಾಡಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ 75 ಭಾರಿ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿದ್ದು 7399 ಕೋಟಿ ರೂ.ಗಳ ಬಂಡವಾಳ ಹೂಡಿಕೆಯಾಗಿ, 32 ಸಾವಿರ ಜನರಿಗೆ ಉದ್ಯೋಗ ಲಭಿಸಿದೆ. ಮಾಗಡಿ ತಾಲೂಕಿನ ಮರೂರಿನಲ್ಲಿ ಕೈಗಾರಿಕೆ ವಿಸ್ತರಣೆಗಾಗಿ 2000 ಎಕರೆ ಪ್ರದೇಶವನ್ನು ಹಾಗೂ ಬಿಡದಿಯಲ್ಲಿ ಮಾಡಲ್ ಟೌನ್‍ಶಿಪ್ ಮಾಡಲು ಚಿಂತಿಸಲಾಗುತ್ತಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.
ಮಾಗಡಿ ತಾಲೂಕಿನ ಕೆಂಪಾಪುರದಲ್ಲಿರುವ ನಾಡಪ್ರಭು ಕೆಂಪೇಗೌಡರ ಸಮಾಧಿಯನ್ನು 15 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಒಟ್ಟಾರೆಯಾಗಿ 30 ಕೋಟಿ ರೂ.ಗಳ ವೆಚ್ಚದಲ್ಲಿ ಕೆಂಪಾಪುರವನ್ನು ಸರ್ವಾಂಗೀಣವಾಗಿ ಅಭಿವೃದ್ಧಿ ಪಡಿಸುವುದರ ಜೊತೆಗೆ ಇಲ್ಲಿನ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ಹೇಳಿದರು.
ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 111 ಅಡಿ ಎತ್ತರದ ಪುತ್ಥಳಿ ನಿರ್ಮಾಣ ಸಾಂಸ್ಕೃತಿಕ ಹಾಗೂ ಪಾರಂಪರಿಕ ಪಾರ್ಕ್‍ಗೆ ಸರಕಾರ 25 ಕೋಟಿ ರೂ.ಅನುದಾನ ನೀಡಿದ್ದು, ಕೆಆರ್‍ಡಿಎಲ್ ಸೇವಾ ಶುಲ್ಕ ಪಡೆಯದೆ ಹಣವನ್ನು ಕಾಮಗಾರಿಗೆ ವಿನಿಯೋಗಿಸಲಿದೆ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರಾದ ಬಿಡದಿ ಹೋಬಳಿಯ ಬಾನಂದೂರು ಗ್ರಾಮದಲ್ಲಿ ವಿಶ್ವದರ್ಜೆಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರವನ್ನು ಸ್ಥಾಪಿಸಲು 25 ಕೋಟಿ ರೂ. ಮೊದಲನೇ ಕಂತಾಗಿ ತಲಾ 14.50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಶೇ.80ಕ್ಕೂ ಹೆಚ್ಚು ರೈತರು 2 ಎಕರೆ ಕ್ಕಿಂತ ಕಡಿಮೆ ಭೂಮಿ ಹೊಂದಿದ್ದಾರೆ. ರೈತರಿಗೆ ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ದೊರಕಿ ಅವರು ಸ್ವಾಭಿಮಾನದ ಬದುಕು ನಡೆಸಬೇಕು ಎಂಬ ಆಶಯದೊಂದಿಗೆ ಕೃಷಿ ಕಲ್ಪ ಸೇರಿದಂತೆ ಹಲವಾರು ಎಫ್.ಪಿ.ಒಗಳಿಗೆ ಕಾಯಕಲ್ಪ ನೀಡಲಾಗಿದೆ. ರಾಮನಗರ ಜಿಲ್ಲೆಯಲ್ಲಿ 1.21 ಲಕ್ಷ ರೈತರಿಗೆ ಕೇಂದ್ರದ ಪಾಲಾದ 200 ಕೋಟಿ ರೂ. ಮತ್ತು ರಾಜ್ಯದ ಕಂತಿನ ಪಾಲಾದ 63 ಕೋಟಿ ರೂ.ಗಳಂತೆ ಒಟ್ಟು 263 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿದೆ ಎಂದು ಅವರು ತಿಳಿಸಿದರು.
ರಾಮನಗರ ಜಿಲ್ಲೆಯಲ್ಲಿ ಕೋವಿಡ್-19 ಲಸಿಕಾ ಕಾರ್ಯಕ್ರಮದಡಿಯಲ್ಲಿ 8.23 ಲಕ್ಷ ಜನರ ಗುರಿಯನ್ನು ಹೊಂದಿದೆ. ಈ ಪೈಕಿ 7.50 ಲಕ್ಷ ಮಂದಿಗೆ ಮೊದಲ ಡೋಸ್ ನೀಡಿ ಶೇ.92ರಷ್ಟು ಪ್ರಗತಿ ಸಾಧಿಸಿದೆ. 4.50 ಲಕ್ಷ ಮಂದಿಗೆ 2ನೇ ಡೋಸ್ ನೀಡಲಾಗಿದೆ. ಮೊದಲನೇ ಡೋಸ್ ನೀಡುವ ಕಾರ್ಯದಲ್ಲಿ ರಾಜ್ಯಕ್ಕೆ ಜಿಲ್ಲೆ 5 ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ 178 ಹಳ್ಳಿಗಳು ಶೇ.100ರಷ್ಟು ಲಸಿಕಾ ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಅಶ್ವತ್ಥ ನಾರಾಯಣ ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಇಕ್ರಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.







