ಮಹಿಳೆ ಮೇಲೆ ಹಲ್ಲೆ ಪ್ರಕರಣ: ಚಿತ್ರನಿರ್ಮಾಪಕ ಸೌಂದರ್ಯ ಜಗದೀಶ್ ಪತ್ನಿ, ಪುತ್ರನಿಗೆ ಜಾಮೀನು
ಬೆಂಗಳೂರು, ನ.1: ಮಹಿಳೆ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಪತ್ನಿ, ಪುತ್ರನಿಗೆ ನಗರದ 46ನೆ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ನ್ಯಾಯಾಲಯವು ರೇಖಾ ಜಗದೀಶ್ ಹಾಗೂ ಪುತ್ರ ಸ್ನೇಹಿತ್‍ಗೆ 30 ದಿನಗಳಲ್ಲಿ ಪ್ರಕರಣದ ತನಿಖಾಧಿಕಾರಿ ಎದುರು ಹಾಜರಾಗುವಂತೆ ಷರತ್ತು ವಿಧಿಸಿದೆ. ಅಲ್ಲದೆ, ಹಲ್ಲೆ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಆದರೆ, ಬಂಧನ ಭೀತಿಯಿಂದ ರೇಖಾ ಹಾಗೂ ಸ್ನೇಹಿತ್ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣವೇನು: ಮನೆ ಕೆಲಸ ಮಾಡುವ ಮಹಿಳೆ ಅನುರಾಧ ನೀಡಿದ ದೂರಿನ ಮೇರೆಗೆ ರೇಖಾ ಜಗದೀಶ್, ಮಗ ಸ್ನೇಹಿತ್, ಮನೆಯ ಬೌನ್ಸರ್‍ಗಳಾದ ನಿಖಿಲ್ ಸೇರಿ 9 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಾಲಕ್ಷ್ಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ ಸೌಂದರ್ಯ ಜಗದೀಶ್ ಮನೆಯ ಪಕ್ಕದ ಮನೆಯೊಂದರಲ್ಲಿ ಅನುರಾಧ, ಕಳೆದ ಎರಡು ವರ್ಷಗಳಿಂದ ಮನೆ ಕೆಲಸ ಮಾಡಿ ತಾಯಿಯೊಂದಿಗೆ ವಾಸ ಮಾಡುತ್ತಿದ್ದರು. ಅ.20ರಂದು ಬೆಳಗ್ಗೆ ಕಸ ಗುಡಿಸುವ ವಿಚಾರಕ್ಕಾಗಿ ಸ್ನೇಹಿತ್ ಹಾಗೂ ಆತನ ಸ್ನೇಹಿತರು ಗಲಾಟೆ ತೆಗೆದಿದ್ದಾರೆ. ಆಗ ಅನುರಾಧ ಮತ್ತು ಸ್ನೇಹಿತ್ ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿದೆ.
ಕೆಲ ಹೊತ್ತಿನ ಬಳಿಕ ಸೌಂದರ್ಯ ಜಗದೀಶ್ ಹಾಗೂ ಬೌನ್ಸರ್‍ಗಳು ಮನೆ ಬಳಿ ಬಂದು ಮತ್ತೆ ಗಲಾಟೆ ತೆಗೆದಿದ್ದಾರೆ. ರೇಖಾ ಜಗದೀಶ್ ಇತರರು ತನ್ನ ಜೊತೆ ವಾಗ್ವಾದಕ್ಕೆ ಇಳಿದು, ವಿವಸ್ತ್ರಗೊಳಿಸಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಬಳಿಕ ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಆದರೆ, ನೋಟಿಸ್ ಬಳಿಕವೂ ಕೂಡ ಆರೋಪಿಗಳು ತನಿಖೆಗೆ ಹಾಜರಾಗಿರಲಿಲ್ಲ.
ಸೆಕ್ಯೂರಿಟಿ ಗಾರ್ಡ್ ಬಂಧನ: ನಂತರ ಹಲ್ಲೆ ಪ್ರಕರಣ ಸಂಬಂಧ ಮನೆಯ ಭದ್ರತಾ ಸಿಬ್ಬಂದಿಯನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದರು. ಆರೋಪಿಗಳು ಮನೆಗೆ ನುಗ್ಗಿ ಹಲ್ಲೆ ನಡೆಸಲು ಪ್ರಚೋದನೆ ಹಾಗೂ ಸಹಾಯ ನೀಡಿದ ಆರೋಪದಡಿ ಸೆಕ್ಯೂರಿಟಿ ಗಾರ್ಡ್ ಬಾಲಾಜಿ ಎಂಬಾತನನ್ನು ಬಂಧಿಸಲಾಗಿತ್ತು. ಆದರೆ, ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಪತ್ನಿ ರೇಖಾ ಜಗದೀಶ್ ಹಾಗೂ ಪುತ್ರ ಸ್ನೇಹಿತ್ ಅವರು ನಾಪತ್ತೆಯಾಗಿದ್ದರು.







