ಮೆಹಬೂಬಾ ಮುಫ್ತಿಗೆ ಮತ್ತೆ ಗೃಹ ಬಂಧನ: ಪಿಡಿಪಿ

ಶ್ರೀನಗರ, ನ. 1: ಕಳೆದ ವಾರ ಭದ್ರತಾ ಪಡೆಗಳು ಹಾಗೂ ಶಂಕಿತ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯ ಸಂದರ್ಭ ಮೃತಪಟ್ಟ ಯುವಕನ ಕುಟುಂಬವನ್ನುಭೇಟಿಯಾಗಲು ಅನಂತ್ನಾಗ್ಗೆ ತೆರಳುವುದನ್ನು ನಿರ್ಬಂಧಿಸಲು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರನ್ನು ಸೋಮಮವಾರ ಗೃಹ ಬಂಧನಕ್ಕೆ ಒಳಪಡಿಸಲಾಗಿದೆ. ಮೆಹಬೂಬಾ ಮುಫ್ತಿ ಅವರ ನಿವಾಸದ ಮುಖ್ಯ ಗೇಟ್ ಅನ್ನು ಪೊಲೀಸರು ಬಂದ್ ಮಾಡಿದ್ದಾರೆ ಎಂದು ಪಿಡಿಪಿ ನಾಯಕರೊಬ್ಬರು ತಿಳಿಸಿದ್ದಾರೆ.
ಭದ್ರತಾ ಕಾರಣಕ್ಕಾಗಿ ಪಿಡಿಪಿಯ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರಿಗೆ ಅನಂತ್ ನಾಗ್ ಗೆ ಭೇಟಿ ನೀಡಲು ಅವಕಾಶ ನೀಡಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶೋಪಿಯಾನ ಜಿಲ್ಲೆಯಲ್ಲಿ ಅಕ್ಟೋಬರ್ 24ರಂದು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್)ಯ ಸಿಬ್ಬಂದಿ ಹಾಗೂ ಶಂಕಿತ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಶಾಹಿದ್ ಅಹ್ಮದ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.
ನಗರದ ಗುಪ್ಕರ್ ಪ್ರದೇಶದಲ್ಲಿರುವ ಫೇರ್ವ್ಯೆವ್ ನಿವಾಸದಲ್ಲಿ ಮೆಹಬೂಬಾ ಮುಫ್ತಿ ಅವರನ್ನು ಗೃಹಂಧನದಲ್ಲಿ ಇರಿಸಲಾಗಿದೆ. ಹೊರಗಡೆ ತೆರಳಲು ಅವಕಾಶ ನೀಡುತ್ತಿಲ್ಲ ಎಂದು ಪಿಡಿಪಿಯ ನಾಯಕರೊಬ್ಬರು ತಿಳಿಸಿದ್ದಾರೆ. ಅವರು ಮೃತಪಟ್ಟ ಯುವಕ ಶಾಹಿದ್ ಅಹ್ಮದ್ ಅವರ ಅವರ ಕುಟುಂಬವನ್ನು ಭೇಟಿಯಾಗಬೇಕಿತ್ತು. ಅವರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಬೇಕಾಗಿತ್ತು. ಆದರೆ, ಅವರು ಮನೆಯಿಂದ ತೆರಳಲು ಅವಕಾಶ ನೀಡುತ್ತಿಲ್ಲ ಎಂದು ಪಿಡಿಪಿಯ ನಾಯಕರು ತಿಳಿಸಿದ್ದಾರೆ.





