ಪ್ರವಾದಿವರ್ಯರ ಜೀವನದ ಮಾದರಿಯನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಿದೆ: ಶಬ್ಬೀರ್ ಅಹ್ಮದ್ ಖಾನ್

ಕಾಪು: ಪ್ರವಾದಿವರ್ಯರ ಜೀವನಸಂದೇಶವನ್ನು ನಮ್ಮ ಬಾಳಿನಲ್ಲಿ ಅಳವಡಿಸಿಕೊಂಡು, ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ಹಾಗೂ ನಾವು ಇತರರಿಗೆ ಬೋಧಿಸುವವರು ಆಗದೆ ನಡೆದು ತೋರಿಸುವವರು ಆಗಬೇಕು ಹಾಗಾದಾಗ ಮಾತ್ರ ನಾವು ಪ್ರವಾದಿವರ್ಯರ ನೈಜ ಸಂದೇಶವನ್ನು ಜನರ ಮುಂದೆ ಸಾರಿದಂತಾಗುವುದು ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಇದರ ಕರ್ನಾಟಕ ರಾಜ್ಯ ಸಲಹಾ ಸಮಿತಿ ಸದಸ್ಯರಾದ ಶಬ್ಬೀರ್ ಅಹ್ಮದ್ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಜಮಾಅತೆ ಇಸ್ಲಾಮಿ ಹಿಂದ್ ಕಾಪು ವರ್ತುಲದ ವತಿಯಿಂದ ಸೋಮವಾರ ಇಲ್ಲಿನ ಕೆಒನ್ ಹೋಟೆಲ್‍ನ ಸಭಾಂಗಣದಲ್ಲಿ ನಡೆದ ಸಮುದಾಯದ ನಾಯಕರೊಂದಿಗೆ ಸ್ನೇಹಕೂಟ ಎಂಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪ್ರವಾದಿ ಮುಹಮ್ಮದರು (ಸ) ಜನಿಸಿದ ಮಾಸದಲ್ಲಿ ನಾವು ಕೇವಲ ಪ್ರವಾದಿವರ್ಯರ ಜೀವನವನ್ನು ಸಾರುವ ಪುಸ್ತಕವನ್ನು ಹಂಚಿ ಸುಮ್ಮನಾಗುತ್ತೇವೆ. ಆದರೆ, ಪ್ರವಾದಿವರ್ಯರ ಸಂದೇಶವನ್ನು ನಾವು ಖುದ್ದು ಜೀವನದಲ್ಲಿ ಅಳವಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಜಮಾಅತೆ ಇಸ್ಲಾಮಿ ಹಿಂದ್, ದ.ಕ ಜಿಲ್ಲೆಯ ಸಂಚಾಲಕರಾದ ಅಮೀನ್ ಅಹ್ಸನ್ ಮಾತನಾಡಿ, ಜಮಾಅತೆ ಇಸ್ಲಾಮಿ ಹಿಂದ್ ಕಳೆದ 70 ವರ್ಷಗಳಿಂದ ಈ ದೇಶದಲ್ಲಿ ಜಾತಿ, ಮತ ಬೇಧವಿಲ್ಲದೆ ಕುರ್ ಆನ್ ಮತ್ತು ಪ್ರವಾದಿ ಚರ್ಯೆಯ ಅಡಿಯಲ್ಲಿ ಸೇವೆ ಸಲ್ಲಿಸುತ್ತಾ ಬರುತ್ತಿದೆ. ಕೆಡುಕನ್ನು ಅಳಿಸಿ ಒಳಿತನ್ನು ಸ್ಥಾಪಿಸುವುದರೊಂದಿಗೆ, ಸಮುದಾಯದ ನಾಯಕತ್ವ ವಹಿಸುವವರು ಸಮಾಜದ ಒಳಿತಿಗಾಗಿ ಹಗಲಿರುಳು ದುಡಿಯುವಂತರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಮಾಜಸೇವೆಗಾಗಿ ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಮುಹಮ್ಮದ್ ಫಾರೂಕ್ ಚಂದ್ರ ನಗರ ಅವರನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಇದರ ಕಾಪು ತಾಲೂಕಿನ ಅಧ್ಯಕ್ಷರಾದ ಶಬಿ ಅಹ್ಮದ್ ಖಾಝಿ ಸನ್ಮಾನಿಸಿದರು.
ಸಭಿಕರಿಂದ ವಿಚಾರ ವಿನಿಮಯ ನಡೆಯಿತು. ಜಮಾಅತೆ ಇಸ್ಲಾಮ್ ಕಾಪು ವರ್ತುಲದ ಕಾರ್ಯದರ್ಶಿಯಾದ ಮುಹಮ್ಮದ್ ಇಕ್ಬಾಲ್ ಸಾಹೇಬ್ ಧನ್ಯವಾದವಿತ್ತರು. ಇಬ್ರಾಹೀಂ ಸಯೀದ್ ಉಮರಿ ಕಿರಾಅತ್ ಪಠಿಸಿ, ಕಾರ್ಯಕ್ರಮ ನಿರೂಪಿಸಿದರು. ಜಮಾಅತೆ ಇಸ್ಲಾಮ್ ಉಡುಪಿ ಜಿಲ್ಲಾಧ್ಯಕ್ಷ ಡಾ,ಅಬ್ದುಲ್ ಅಝೀಝ್ ಮಣಿಪಾಲ, ಕಾಪು ಜಮಾಅತೆ ಇಸ್ಲಾಮಿ ಹಿಂದ್ ನ ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಕಾಪು, ಆಸಿಫ್ ಜಿಡಿ, ಮುಹಮ್ಮದ್ ಅಲಿ, ಮುಹಮ್ಮದ್ ಫಾರೂಕ್, ಮುಹಮ್ಮದ್ ಹಾಶಿಮ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.







