ಭಾರತ ಸೇವಾದಳದಿಂದ ಡಾ. ಸುಬ್ಬರಾವ್, ಪುನೀತ್ ರಾಜಕುಮಾರ್‌ಗೆ ಶ್ರದ್ದಾಂಜಲಿ ಸಭೆ

ಮಂಗಳೂರು, ನ.1: ಭಾರತ ಸೇವಾದಳ ವತಿಯಿಂದ ಇತ್ತೀಚೆಗೆ ನಿಧನರಾದ ಸೇವಾದಳದ ರಾಷ್ಟ್ರೀಯ ನಾಯಕ ಡಾ.ಎಸ್.ಎನ್.ಸುಬ್ಬರಾವ್ ಮತ್ತು ಚಲನಚಿತ್ರ ನಟ ಪುನೀತ್ ರಾಜಕುಮಾರ್ ರಿಗೆ ಶ್ರದ್ಧಾಂಜಲಿ ಸಭೆಯನ್ನು ಬಾವುಟಗುಡ್ಡೆ ಯಲ್ಲಿರುವ ಭಾರತ ಸೇವಾದಳ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಬಶೀರ್ ಬೈಕಂಪಾಡಿ ಅಧ್ಯಕ್ಷತೆ ವಹಿಸಿದ್ದರು.
ಸೇವಾದಳ ಮಂಗಳೂರು ತಾಲೂಕು ಅಧ್ಯಕ್ಷ ಪ್ರಭಾಕರ್ ಶ್ರೀಯಾನ್ ಮಾತನಾಡಿ, ಡಾ.ಎಸ್.ಎನ್. ಸುಬ್ಬರಾವ್ ಗಾಂಧಿ ವಾಧಿಯಾಗಿದ್ದು, ಸ್ವಾತಂತ್ರ ಹೋರಾಟದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಅವರು ಮಹಾತ್ಮಾ ಗಾಂಧೀಜಿ ಮತ್ತು ಸೇವಾದಳ ಸ್ಥಾಪಕ ಡಾ.ಎನ್.ಎಸ್ ಹರ್ಡಿಕರ್‌ರಿಗೆ ಆತ್ಮೀಯರಾಗಿದ್ದರು ಎಂದು ಅವರನ್ನು ಸ್ಮರಿಸಿದರು.
ಖ್ಯಾತ ಚಲನಚಿತ್ರ ನಟ ಪುನೀತ್ ರಾಜಕುಮಾರ್‌ರ ಅಕಾಲಿಕ ನಿಧನ ನಮ್ಮೆಲ್ಲರಿಗೂ ನೋವು ತಂದಿದ್ದು, ಇವರ ನಿಧನ ಚಿತ್ರರಂಗಕ್ಕೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಮಾಡಿದ ಅನೇಕ ಸಮಾಜಮುಖಿ ಕೆಲಸಕಾರ್ಯಗಳು ನಿಜಕ್ಕೂ ಅದ್ಬುತ ಎಂದು ಅವರಿಗೆ ನುಡಿನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಟಿ.ಕೆ. ಸುಧೀರ್, ಮುಖ್ಯ ಸಂಘಟಕ ಮಂಜೇಗೌಡ, ಸದಸ್ಯರುಗಳಾದ ಪ್ರೇಮ್ ಚಂದ್, ಕೃತಿನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.







