ವಿಷಾಹಾರ ಸೇವನೆಯಿಂದ 47 ಪ್ರವಾಸಿಗರು ಅಸ್ವಸ್ಥ: ಈಜಿಪ್ಟ್ ರೆಸಾರ್ಟ್ ನ 3 ಸಿಬ್ಬಂದಿಗಳ ಬಂಧನಕ್ಕೆ ಆದೇಶ

ಸಾಂದರ್ಭಿಕ ಚಿತ್ರ
ಕೈರೋ, ನ.1: ಈಜಿಪ್ಟ್ನ ಜನಪ್ರಿಯ ರೆಡ್ಸೀ ರೆಸಾರ್ಟ್ನಲ್ಲಿ ಆಹಾರ ನಂಜು(ವಿಷಾಹಾರ ಸೇವನೆ) ಸಮಸ್ಯೆಯಿಂದ 47 ಪ್ರವಾಸಿಗರು ಅಸ್ವಸ್ಥರಾಗಿದ್ದು ಪ್ರಕರಣಕ್ಕೆ ಸಂಬಂಧಿಸಿ ಹೋಟೆಲ್ನ 3 ಸಿಬಂದಿಗಳ ಬಂಧನಕ್ಕೆ ಮುಖ್ಯ ಅಭಿಯೋಜಕರು ಆದೇಶಿದ್ದಾರೆ.
ಹರ್ಘದ ನಗರದ ರೆಡ್ಸೀ ರೆಸಾರ್ಟ್ನಲ್ಲಿ ವಾರಾಂತ್ಯದ ಸಂಭ್ರಮಾಚರಣೆಗೆ ಸೇರಿದ್ದ ಪ್ರವಾಸಿಗರು ರಾತ್ರಿಯ ಊಟದ ಬಳಿಕ ಅಸ್ವಸ್ಥರಾಗಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಥಿಯೋಪಿಯಾದ 14, ರಶ್ಯಾದ 29 ಮತ್ತು ಝೆಕ್ ಗಣರಾಜ್ಯದ 4 ಪ್ರವಾಸಿಗರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅತಿಥಿಗಳ ಪ್ರಾಣವನ್ನು ಅಪಾಯಕ್ಕೆ ಒಳಗಾಗಿಸಿದ ಆರೋಪದಲ್ಲಿ ಹೋಟೆಲ್ನ ಮುಖ್ಯ ಬಾಣಸಿಗನ ಸಹಿತ 3 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಬಂಧನಕ್ಕೆ ಆದೇಶಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಹೋಟೆಲ್ ಮುಚ್ಚುವಂತೆ ಈಜಿಪ್ಟ್ ಪ್ರವಾಸೋದ್ಯಮ ಇಲಾಖೆ ಆದೇಶಿಸಿದ್ದು ಹೋಟೆಲ್ನ ನಿರ್ದೇಶಕನನ್ನು ವಜಾಗೊಳಿಸಿ ಆತನ ಲೈಸೆನ್ಸ್ ಅನ್ನು ಅಮಾನತುಗೊಳಿಸಿದೆ. ಎಲ್ಲಾ ಪ್ರವಾಸಿಗರೂ ಚೇತರಿಸಿಕೊಂಡಿದ್ದು ಹೋಟೆಲ್ನಲ್ಲಿದ್ದ ಇತರ ಪ್ರವಾಸಿಗರನ್ನು ಬೇರೆ ರೆಸಾರ್ಟ್ಗೆ ಸ್ಥಳಾಂತರಿಸಲಾಗಿದೆ ಎಂದು ರಶ್ಯಾದ ಸುದ್ಧಿಸಂಸ್ಥೆ ತಾಸ್ ವರದಿ ಮಾಡಿದೆ. ಪ್ರವಾಸೋದ್ದಿಮೆ ಪ್ರಮುಖ ಆದಾಯ ಮೂಲವಾಗಿರುವ ಈಜಿಪ್ಟ್ನ ಅರ್ಥವ್ಯವಸ್ಥೆ ಕೊರೋನ ಸೋಂಕಿನ ಆಘಾತದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಪ್ರವಾಸಿಗರನ್ನು ಆಕರ್ಷಿಸಲು ರೆಡ್ಸೀ ರೆಸಾರ್ಟ್ ಸಹಿತ ಪ್ರಮುಖ ಹೋಟೆಲ್ಗಳಲ್ಲಿ ಕೊರೋನ ಸಂಬಂಧಿ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ.







