ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಬಂಧನ

ಮುಂಬೈ, ನ.2: ಹಣಕಾಸು ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರನ್ನು ಬಲ್ಲಾರ್ಡ್ ಎಸ್ಟೇಟ್‌ನಲ್ಲಿ ಹನ್ನೆರಡು ಗಂಟೆ ಕಾಲ ವಿಚಾರಣೆಗೆ ಗುರಿಪಡಿಸಿದ ಕಾನೂನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸೋಮವಾರ ತಡರಾತ್ರಿ ಬಂಧಿಸಿದ್ದಾರೆ.
ತಮ್ಮ ವಿರುದ್ಧ ಸಲ್ಲಿಸಲಾಗಿರುವ ಹಣಕಾಸು ಅಕ್ರಮ ಆರೋಪದ ಬಗ್ಗೆ ನಿರ್ದೇಶನಾಲಯ ನೀಡಿರುವ ಸಮನ್ಸ್ ರದ್ದುಪಡಿಸಬೇಕು ಎಂದು ಕೋರಿ ಅವರು ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ರದ್ದುಪಡಿಸಿದ ಮೂರು ದಿನಗಳ ಬಳಿಕ ಹೇಳಿಕೆ ದಾಖಲಿಸುವ ಸಲುವಾಗಿ ಮಧ್ಯಾಹ್ನ ವೇಳೆಗೆ ನಿರ್ದೇಶನಾಲಯ ಕಚೇರಿಗೆ ದೇಶಮುಖ್ ಭೇಟಿ ನೀಡಿದ್ದರು.
ಹಲವು ತಿಂಗಳುಗಳಿಂದ ಕಾನೂನು ಜಾರಿ ನಿರ್ದೇಶನಾಲಯದ ವಿಚಾರಣೆಗೆ ದೇಶ್ ಮುಖ್ ತಪ್ಪಿಸಿಕೊಳ್ಳುತ್ತಿದ್ದರು ಮತ್ತು ಎಲ್ಲ ಕಾನೂನಾತ್ಮಕ ಪರಿಹಾರಗಳು ಬರಿದಾದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವುದು ಅನಿವಾರ್ಯವಾಗಿತ್ತು. ಕಳೆದ ಕೆಲ ತಿಂಗಳುಗಳಲ್ಲಿ ದೇಶ್ ಮುಖ್ ಅವರನ್ನು ಪತ್ತೆ ಮಾಡಲು ಹಲವು ಕಡೆ ನಿರ್ದೇಶಾಲಯ ವಿಫಲ ದಾಳಿ ನಡೆಸಿತ್ತು.
ಆದರೆ ಮಧ್ಯಾಹ್ನ ವೇಳೆಗೆ ವಕೀಲರ ಜತೆ ವಿಚಾರಣೆಗೆ ಹಾಜರಾಗಿದ್ದು ಇ.ಡಿ. ಅಧಿಕಾರಿಗಳ ಅಚ್ಚರಿಗೆ ಕಾರಣವಾಗಿತ್ತು. ದೇಶ್ ಮುಖ್ ಆಗಮದ ತಕ್ಷಣ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದರು. ಏಜೆನ್ಸಿಯ ಹೆಚ್ಚುವರಿ ನಿರ್ದೇಶಕರು ಇಡೀ ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ ಸಂಜೆ ದಿಲ್ಲಿಯಿಂದ ಆಗಮಿಸಿದ್ದರು. ಇದಕ್ಕೂ ಮುನ್ನ ದೇಶಮುಖ್ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಪಲಾಂಡೆ ಮತ್ತು ಆಪ್ತ ಸಹಾಯಕ ಕುಂದನ್ ಶಿಂಧೆ ಅವರನ್ನು ದೇಶಮುಖ್ ಅವರಿಗೆ ಅಕ್ರಮ ಹಣಕಾಸು ವ್ಯವಹಾರಕ್ಕೆ ನೆರವು ನೀಡಿದ ಆರೋಪದಲ್ಲಿ ಬಂಧಿಸಲಾಗಿತ್ತು.