ಉಪ ಚುನಾವಣೆ: ರಾಜಸ್ಥಾನದಲ್ಲಿ ಕಾಂಗ್ರೆಸ್, ಪ.ಬಂಗಾಳದಲ್ಲಿ ತೃಣಮೂಲಕ್ಕೆ ಮುನ್ನಡೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: 13 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿಯಲ್ಲಿ ಮೂರು ಲೋಕಸಭೆ ಹಾಗೂ 29 ವಿಧಾನಸಭಾ ಸ್ಥಾನಗಳ ಮತ ಎಣಿಕೆ ಮಂಗಳವಾರ ಬೆಳಗ್ಗೆ ಆರಂಭವಾಗಿದೆ.
ಅಸ್ಸಾಂನ ಐದು ಸ್ಥಾನಗಳ ಪೈಕಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಮೂರೂ ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಕಾಂಗ್ರೆಸ್ ಒಂದರಲ್ಲಿ ಮುನ್ನಡೆಯಲ್ಲಿದೆ. ಬಿಜೆಪಿಯ ಮೈತ್ರಿಕೂಟದ ಪಾಲುದಾರ ಯುಪಿಪಿಎಲ್ ಉಳಿದಿರುವ ಒಂದರಲ್ಲಿ ಮುನ್ನಡೆ ಸಾಧಿಸಿದೆ.
ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಜನತಾ ದಳ ಯುನೈಟೆಡ್ ಒಂದು ಸ್ಥಾನದಲ್ಲಿ ಮುಂದಿದೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ವಲ್ಲಭನಗರ ಮತ್ತು ಧರಿಯಾವಾಡ 2 ಸ್ಥಾನಗಳಲ್ಲಿ ಮುಂದಿದೆ ಈ ಚುನಾವಣೆಯು ಅಶೋಕ್ ಗೆಹ್ಲೋಟ್ ಸರಕಾರದ ಕಾರ್ಯಕ್ಷಮತೆಯ ಮೇಲೆ ಜನಾಭಿಪ್ರಾಯ ಎಂದು ಪರಿಗಣಿಸಲಾಗುತ್ತದೆ.
ಬಂಗಾಳದ ಎಲ್ಲಾ ನಾಲ್ಕು ಸ್ಥಾನಗಳಲ್ಲಿ ತೃಣಮೂಲ ಕಾಂಗ್ರೆಸ್ ಮುಂದಿದೆ.
ಮಧ್ಯಪ್ರದೇಶ 3 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ಬಿಹಾರದ 1 ಸ್ಥಾನದಲ್ಲಿ ಆರ್ ಜೆಡಿ ಮುನ್ನಡೆಯಲ್ಲಿದೆ.
ಕಾರ್ಗಿಲ್ ಯುದ್ಧ ವೀರ ಬ್ರಿಗೇಡಿಯರ್ (ನಿವೃತ್ತ) ಖುಶಾಲ್ ಠಾಕೂರ್ ಅವರನ್ನು ಕಣಕ್ಕಿಳಿಸಿರುವ ಮಂಡಿ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಮುಂದಿದೆ. ಠಾಕೂರ್ ಅವರು ಕಾಂಗ್ರೆಸ್ನ ದಿವಂಗತ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಅವರಿಗಿಂತ ಸುಮಾರು 1,800 ಮತಗಳಿಂದ ಮುಂದಿದ್ದಾರೆ. ಮಧ್ಯಪ್ರದೇಶದ ಖಾಂಡ್ವಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜ್ಞಾನೇಶ್ವರ್ ಪಾಟೀಲ್ ಕೂಡ ಮುನ್ನಡೆಯಲ್ಲಿದ್ದಾರೆ.
ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ ಹವೇಲಿಯಲ್ಲಿ ಶಿವಸೇನೆ ಮುಂದಿದೆ.
ಅಸ್ಸಾಂನಲ್ಲಿ ಐದು, ಬಂಗಾಳದಲ್ಲಿ ನಾಲ್ಕು, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಹಾಗೂ ಮೇಘಾಲಯದಲ್ಲಿ ತಲಾ ಮೂರು, ಬಿಹಾರ, ಕರ್ನಾಟಕ ಹಾಗೂ ರಾಜಸ್ಥಾನದಲ್ಲಿ ತಲಾ ಎರಡು ಮತ್ತು ಆಂಧ್ರಪ್ರದೇಶ, ಹರಿಯಾಣ, ಮಹಾರಾಷ್ಟ್ರ ಮಿಝೋರಾಂ ಹಾಗೂ ತೆಲಂಗಾಣ ದಲ್ಲಿ ತಲಾ ಒಂದು ಸ್ಥಾನಗಳಿಗೆ ಶನಿವಾರ ಉಪಚುನಾವಣೆ ನಡೆಯಿತು.