ಬಂಗಾಳ ಉಪಚುನಾವಣೆ: ಬಿಜೆಪಿ ಭದ್ರಕೋಟೆ ದಿನ್ಹಟಾ ಸೇರಿದಂತೆ ಎಲ್ಲಾ ನಾಲ್ಕು ಸ್ಥಾನಗಳಲ್ಲಿ ತೃಣಮೂಲಕ್ಕೆ ಮುನ್ನಡೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಎಲ್ಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ಬಿಗಿ ಭದ್ರತೆಯ ನಡುವೆ ಖಾರ್ದಾಹ್, ಶಾಂತಿಪುರ, ಗೋಸಾಬಾ ಹಾಗೂ ದಿನ್ಹಟಾ ಮತಗಳ ಎಣಿಕೆ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಯಿತು.
ಕೂಚ್‌ಬೆಹರ್ ಜಿಲ್ಲೆಯ ದಿನ್ಹಟಾದಲ್ಲಿ ಟಿಎಂಸಿಯ ಉದಯನ್ ಗುಹಾ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಅಶೋಕ್ ಮಂಡಲ್‌ಗಿಂತ 81,460 ಮತಗಳ ಭಾರೀ ಅಂತರದಿಂದ ಮುಂದಿದ್ದಾರೆ.
ಹತ್ತು ಸುತ್ತುಗಳ ನಂತರ ಗುಹಾ 96,537 ಮತಗಳನ್ನು ಗಳಿಸಿದರೆ, ಮಂಡಲ್ 15,077 ಮತಗಳನ್ನು ಪಡೆದರು.
14 ಸುತ್ತಿನ ಮತ ಎಣಿಕೆಯ ನಂತರ, ದಕ್ಷಿಣ 24 ಪರಗಣದ ಗೋಸಾಬಾ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿ 1,24,249 ಮತಗಳ ಅಂತರದಿಂದ ತನ್ನ ಪ್ರತಿಸ್ಪರ್ಧಿ ಬಿಜೆಪಿಗಿಂತ ಮುಂದಿದೆ.
ಟಿಎಂಸಿಯ ಸುಬ್ರತಾ ಮೊಂಡಲ್ 1,41,262 ಮತಗಳನ್ನು ಗಳಿಸಿದರೆ, ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಪಲಾಶ್ ರಾಣಾ ಕೇವಲ 17,013 ಮತಗಳನ್ನು ಗಳಿಸಿದರು.
ಶಾಂತಿಪುರ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿಯ ಬ್ರಜ ಕಿಶೋರ್ ಗೋಸ್ವಾಮಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ನಿರಂಜನ್ ಬಿಸ್ವಾಸ್ ಅವರಿಗಿಂತ 15,548 ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಖರ್ದಾಹ್ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯ ಸಚಿವ ಸೋವಂದೇಬ್ ಚಟ್ಟೋಪಾಧ್ಯಾಯ ಅವರು ಸಿಪಿಐ(ಎಂ) ನ ದೇಬಜ್ಯೋತಿ ದಾಸ್ ಅವರಿಗಿಂತ ಮುಂದಿದ್ದಾರೆ. ಅವರು ಇಲ್ಲಿಯವರೆಗೆ ಎಣಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.