ಆಲಿಘರ್: ಬಟ್ಟೆ ವ್ಯಾಪಾರಿಯ ಮೇಲೆ ಹಲ್ಲೆಗೈದು ಜೈ ಶ್ರೀ ರಾಮ್ ಹೇಳಲು ಬಲವಂತಪಡಿಸಿದ ಬಜರಂಗದಳ ಕಾರ್ಯಕರ್ತರು
ಹೊಸದಿಲ್ಲಿ: ಸೈಕಲಿನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬನ ಮೇಲೆ ಉತ್ತರ ಪ್ರದೇಶದ ಆಲಿಘರ್ ಎಂಬಲ್ಲಿ ಅಕ್ಟೋಬರ್ 31ರಂದು ಹಲ್ಲೆ ನಡೆಸಿದ ಇಬ್ಬರು ಬಜರಂಗ ದಳ ಕಾರ್ಯಕರ್ತರು ಆತನಿಗೆ ಜೈ ಶ್ರೀ ರಾಮ್ ಹೇಳುವಂತೆಯೂ ಬಲವಂತಪಡಿಸಿದ್ದಾರೆಂದು ಆರೋಪಿಸಲಾಗಿದೆ ಎಂದು thewire.in ವರದಿ ಮಾಡಿದೆ.
ಆರೋಪಿಗಳು ತಂದೆ-ಮಗ ಎಂದು ತಿಳಿದು ಬಂದಿದೆ, ಇಬ್ಬರನ್ನೂ ಬಂಧಿಸಲಾಗಿದೆ.
ಸಂತ್ರಸ್ತ ಆಮಿರ್ ಖಾನ್ ಎಂಬಾತನನ್ನು ಮೊದಲು ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜೆ ಎನ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಲಿಘರ್ ನ ನಗ್ಲಾ ಖೇಮ್ ಪ್ರದೇಶದಲ್ಲಿ ಗ್ರಾಹಕರಿಗೆ ಬಟ್ಟೆಗಳನ್ನು ತೋರಿಸುತ್ತಿರುವ ಸಂದರ್ಭ ಆರೋಪಿಗಳು ಆತನ ಬಳಿ ಆತನ ಹೆಸರು ಕೇಳಿದ್ದಾರೆ. ನಂತರ ಆತ ಮುಸ್ಲಿಂ ಎಂದು ತಿಳಿಯುತ್ತಲೇ, ಜೈ ಶ್ರೀ ರಾಮ್ ಎಂದು ಹೇಳುವಂತೆ ಬಲವಂತಪಡಿಸಿದ್ದರೆಂದು ಆರೋಪಿಸಲಾಗಿದೆಯಲ್ಲದೆ ಕ್ಯಾಲೆಂಡರ್ ಒಂದರಲ್ಲಿ ಹಿಂದು ದೇವರ ಪಾದ ಮುಟ್ಟಿ ನಮಸ್ಕರಿಸುವಂತೆ ಒತ್ತಡ ಹೇರಿದ್ದಾರೆ. ನಂತರ ಆತನ ಮೊಟಾರ್ ಸೈಕಲ್‍ಗೂ ಬೆಂಕಿ ಹಚ್ಚುವ ಯತ್ನ ನಡೆದಿದೆಯೆನ್ನಲಾಗಿದೆ.
ಸ್ಥಳೀಯ ಮಹಿಳೆಯರು ಆತನ ಬೆಂಬಲಕ್ಕೆ ನಿಂತರೂ ಪ್ರಯೋಜನವಾಗಿರಲಿಲ್ಲವೆನ್ನಲಾಗಿದೆ. ತನ್ನ ಬಳಿಯಿದ್ದ ಫೋನ್ ಹಾಗೂ ರೂ 10,000 ನಗದನ್ನೂ ಆರೋಪಿಗಳು ಸೆಳೆದಿದ್ದಾರೆಂದು ಆತ ಆರೋಪಿಸಿದ್ಧಾನೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಆಲಿಘರ್ ಪೊಲೀಸರು, ಸಂತ್ರಸ್ತ ಮಾರಾಟ ಮಾಡುತ್ತಿದ್ದ ಬಟ್ಟೆಗಳ ದರಗಳ ಕುರಿತು ಜಗಳವೇರ್ಪಟ್ಟ ನಂತರ ಘಟನೆ ನಡೆದಿದೆ ಎಂದಿದ್ದಾರೆ.
भ्रामक तथ्य न फैलाएं -फेरी के कपड़े की कीमत को लेकर विवाद हुआ-पुलिस ने तत्काल पहुंच, घायल को अस्पताल भेजा तथा FIR दर्ज कर आरोपी राजू व उसके बेटे देवेश को गिरफ्तार कर जेल भेजा ।
— ALIGARH POLICE (@aligarhpolice) October 31, 2021