ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟ: ಅಸದುಲ್ಲಾ ನೇತೃತ್ವದ ಕರ್ನಾಟಕ ತಂಡಕ್ಕೆ ದ್ವಿತೀಯ ಸ್ಥಾನ
ರಾಜ್ಯ ತಂಡದ ಮುಖ್ಯ ತರಬೇತುದಾರ, ಮೂವರು ಕ್ರೀಡಾಪಟುಗಳು ಉಪ್ಪಿನಂಗಡಿಯವರು

ಉಪ್ಪಿನಂಗಡಿ: ರಾಷ್ಟ್ರಮಟ್ಟದ ಸಬ್ ಜೂನಿಯರ್ ಹುಡುಗರ ವಿಭಾಗದ ಥ್ರೋಬಾಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡವು ದ್ವಿತೀಯ ಸ್ಥಾನ ಪಡೆದಿದ್ದು, ಆ ತಂಡದ ಮುಖ್ಯ ತರಬೇತುದಾರ ಹಾಗೂ ತಂಡದ ನಾಯಕ ಸೇರಿದಂತೆ ಮೂವರು ಕ್ರೀಡಾಳುಗಳು ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದವರಾಗಿದ್ದಾರೆ.
ಕರ್ನಾಟಕ ರಾಜ್ಯ ತಂಡದ ತರಬೇತುದಾರಾದ ವಿಜೇತ್ ಕುಮಾರ್ ಇಂದ್ರಪ್ರಸ್ಥ ವಿದ್ಯಾಲಯದ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದು, ಇದೇ ವಿದ್ಯಾಲಯದ 10ನೇ ತರಗತಿ ವಿದ್ಯಾರ್ಥಿ ಅಸದುಲ್ಲಾ ಸಲೀಂ, ಕರ್ನಾಟಕ ರಾಜ್ಯ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದ. ಈ ತಂಡದಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿಗಳಾದ ಅನೂಫ್ ಶೆಣೈ ಮತ್ತು ಐಮನ್ ಶಾಫಿ ಆಡಿದ್ದರು. ಇನ್ನುಳಿದಂತೆ ಕರ್ನಾಟಕ ರಾಜ್ಯ ತಂಡದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ಕ್ರೀಡಾಪಟುಗಳಾದ ಅಭಿಶೃತ್, ಸುಜೀತ್, ತೇಜಸ್ ಡಿ.ಎಸ್., ಕಾರ್ತಿಕ್ ಬಿ., ನಂದನ್ ಗೌಡ ಎಸ್., ಸಿದ್ಧರಾಜು, ಆನಂದ ಪಿ., ಮಹಾಂತಯ್ಯ ಎಂ., ಕಾಸೀಂ ಸಾಬ್, ಧನುಷ್ ಡಿ., ವಿಶ್ವಾಸ್ ಜಿ., ಶ್ರೀಕಾಂತ್ ಗೌಡ ಇದ್ದರು.
ಹರಿಯಾಣದ ರೋಹ್ಟಕ್ ನ ಎಂ.ಡಿ. ವಿವಿಯಲ್ಲಿ ಅ.29ರಿಂದ 31ರವರೆಗೆ ಮೂರು ದಿನಗಳ ಕಾಲ ರಾಷ್ಟ್ರಮಟ್ಟದ ಈ ಪಂದ್ಯಾಟ ಜರಗಿತ್ತು. ತಂಡದ ನಾಯಕತ್ವ ವಹಿಸಿದ್ದ ಅಸದುಲ್ಲಾ ಸಲೀಂ 34 ನೆಕ್ಕಿಲಾಡಿಯ ಮುಹಮ್ಮದ್ ಸಲೀಂ ಹಾಗೂ ನಸೀಮಾ ದಂಪತಿಯ ಪುತ್ರ. ಆಟಗಾರರಾದ ಅನೂಫ್ ಶೆಣೈ ಉಪ್ಪಿನಂಗಡಿಯ ಅನಂತ ಶೆಣೈ ಮತ್ತು ಅನುಷಾ ಶೆಣೈ ದಂಪತಿಯ ಪುತ್ರ. ಐಮನ್ ಶಾಫಿ ಉಪ್ಪಿನಂಗಡಿಯ ಸಿದ್ದೀಕ್ ಮತ್ತು ಮುಮ್ತಾಝ್ ದಂಪತಿಯ ಪುತ್ರ.
ತಂಡದ ಮುಖ್ಯ ತರಬೇತುದಾರ ವಿಜೇತ್ ಕುಮಾರ್ ಅವರು ಉತ್ತಮ ಕ್ರೀಡಾಳುವಾಗಿದ್ದು, ಉತ್ತಮ ತರಬೇತಿಯ ಮೂಲಕ ಗ್ರಾಮೀಣ ವಿದ್ಯಾರ್ಥಿಗಳನ್ನು ರಾಷ್ಟ್ರಮಟ್ಟದ ಸ್ಪರ್ಧೆಗೆ ಅಣಿಗೊಳಿಸಿ, ಕರ್ನಾಟಕ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ.
_0.jpeg)
ಅಸದುಲ್ಲಾ ಸಲೀಂ







