ಮಂಗಳೂರು: 24 ಸರಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಏಳು ಆರೋಪಿಗಳ ಬಂಧನ
ಮತ್ತಿಬ್ಬರಿಗಾಗಿ ಮುಂದುವರಿದ ಕಾರ್ಯಾಚರಣೆ

ಮಂಗಳೂರು, ನ.2: ಕಳೆದ ಜುಲೈ ತಿಂಗಳಿನಿಂದ ಅಕ್ಟೋಬರ್‌ವರೆಗೆ ನಗರದ ವಿವಿಧ ಕಡೆಗಳಲ್ಲಿ ಸರಗಳ್ಳತನ, ಸುಲಿಗೆ, ದ್ವಿಚಕ್ರಗಳ ಕಳವು, ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ 24 ಪ್ರಕರಣಗಳಲ್ಲಿ ಏಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಹು ಮುಖ್ಯವಾಗಿ ಮಹಿಳೆಯರು ಒಬ್ಬಂಟಿಯಾಗಿ ನಿರ್ಜನ ಪ್ರದೇಶಗಳಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸರ ಸೇರಿದಂತೆ ಆಭರಣಗಳನ್ನು ಸೆಳೆ ದೊಯ್ಯುತ್ತಿದ್ದ ಪ್ರಕರಣಗಳು ಈ ನಾಲ್ಕು ತಿಂಗಳ ಅವಧಿಯಲ್ಲಿ ಸಾರ್ವಜನಿಕರಲ್ಲಿ ಭಯ, ಆತಂಕಕ್ಕೆ ಕಾರಣವಾಗಿದ್ದರೆ, ಪೊಲೀಸರ ನಿದ್ದೆಗೆಡಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿಮತ್ತಿಬ್ಬರು ಆರೋಪಿಗಳು ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ
.ಬಂಧಿತ ಆರೋಪಿಗಳನ್ನು ಕಾವೂರು ನಿವಾಸಿ ಅಬ್ದುಲ್ ಇಶಾಮ್ ಯಾನೆ ಇಶಾಮ್ (26), ಪಂಜಿಮೊಗರು ನಿವಾಸಿ ಸಫ್ವಾನ್ ಯಾನೆ ಸಪ್ಪು (29), ಕಾವೂರು ನಿವಾಸಿ ಮುಹಮ್ಮದ್ ತೌಸೀಫ್ ಯಾನೆ ಹಾರಿಸ್, ಶಾಂತಿನಗರ ನಿವಾಸಿ ಅಬ್ದುಲ್ ಖಾದರ್ ಸಿನಾನ್ (30), ಮಲ್ಲೂರು ಮುಹಮ್ಮದ್ ಫಝಲ್ ಯಾನೆ ಪಜ್ಜು (32), ಚೊಕ್ಕಬೆಟ್ಟು ನಿವಾಸಿ ಅರ್ಷದ್ (34) ಹಾಗೂ ಕುಂದಾಪುರ ನಿವಾಸಿ ಮುಜಾಹಿದುರ್ ರಹ್ಮಾನ್ (23) ಎಂದು ಗುರುತಿಸಲಾಗಿದೆ.
ಬಂಧಿತರಿಂದ 10 ಲಕ್ಷ ರೂ. ವೌಲ್ಯದ 210 ಗ್ರಂ ಚಿನ್ನದ ಸರ, ಕರಿಮಣಿ ಸರ ಹಾಗೂ 2 ಲಕ್ಷ ರೂ. ವೌಲ್ಯದ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಇನ್ನೂ ಹಲವು ಕಡೆಗಳಲ್ಲಿ ಎಗರಿಸಿರುವ ಚ್ನಿನಾಭರಣಗಳು ಹಾಗೂ ಕಳವು ಮಾಡಿರುವ 5ಕ್ಕೂ ಅಧಿಕ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಬೇಕಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ
ಆರೋಪಿಗಳ ವಿರುದ್ಧ ಬಜ್ಪೆೆ, ಬಂದರು, ಬರ್ಕೆ ಪೊಲೀಸ್ ಠಾಣೆಗಳಲ್ಲಿ ತಲಾ 1 ಸರಗಳ್ಳತನ, ಕಾವೂರು ಠಾಣೆಯಲ್ಲಿ 4 ಸರಗಳ್ಳತನ, 2 ಸರಗಳ್ಳತನಕ್ಕೆ ಪ್ರಯತ್ನ, 2ಬೈಕ್ ಕಳವು, ಉರ್ವ ಠಾಣೆಯಲ್ಲಿ 4 ಸರಗಳ್ಳತನ, 1 ಸರಗಳ್ಳತನಕ್ಕೆ ಯತ್ನ, 1 ದರೋಡೆ ಪ್ರಕರಣ, ಮಂಗಳೂರು ಪೂರ್ವ ಠಾಣೆಯಲ್ಲಿ 2 ಸರಗಳ್ಳತನ, 2 ಸರಗಳ್ಳತನ ಪ್ರಯತ್ನ, 1 ದರೋಡೆ ಪ್ರಕರಣ, ಕಂಕನಾಡಿ ನಗರ ಠಾಣೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಹಾಗೂ ಉಳ್ಳಾಲ ಠಾಣೆಯಲ್ಲಿ 1 ಸ್ಕೂಟರ್ ಕಳವು ಸೇರಿದಂತೆ 24 ಪ್ರಕರಣಗಳಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ. ಇದಲ್ಲದೆ ಬಂಧಿತ ಆರೋಪಿಗಳಲ್ಲಿ ನಾಲ್ವರು ಈ ಹಿಂದೆಯೂ ಅಪರಾಧ ಹಿನ್ನೆಲೆ ಉಳ್ಳವರಾಗಿದ್ದಾರೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಕಳವು ಮಾಡಿದ ಚಿನ್ನಾಭರಣಗಳನ್ನು ಬಂಟ್ವಾಳದ ಕೆಲವು ಚಿನ್ನದ ಅಂಗಡಿಗಳಿಗೆ ಮಾರಾಟ ಮಾಡಿದ್ದು, ಅವರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಕೃತ್ಯಕ್ಕಾಗಿ ತಮ್ಮ ವಾಹನಗಳನ್ನು ಉಪಯೋಗಿಸದೆ ಕಳವು ಮಾಡಿದ ವಾಹನಗಳನ್ನು ಉಪಯೋಗಿಸುತ್ತಿದ್ದ ಬಗ್ಗೆ ವಿಚಾರಣೆ ವೇಳೆ ತಿಳಿದು ಬಂದಿದ್ದು, ಬೈಕ್ ಕದಿಯಲು ನಕಲಿ ಕೀಗಾಗಿ ಸ್ಥಳೀಯ ಮೆಕ್ಯಾನಿಕ್ ಬಳಿ ತರಬೇತಿಯನ್ನು ಪಡೆದಿರುವುದು ಕಂಡು ಬಂದಿದೆ. ತಾವು ಕಳವು ಮಾಡಲುದ್ದೇಶಿಸುವ ಪ್ರದೇಶಗಳನ್ನು ಮುಂಚಿತವಾಗಿ ಸಾಕಷ್ಟು ಅಧ್ಯಯನ ನಡೆಸಿ ಅಲ್ಲಿ ಯಾವುದೇ ರೀತಿಯ ಸಿಸಿಟಿವಿ ಕ್ಯಾಮರಾಗಳು ಇಲ್ಲದಿರುವುದನ್ನು ಕೂಡಾ ಈ ಆರೋಪಿಗಳು ಖಾತರಿಪಡಿಸಿಕೊಂಡೇ ಕೃತ್ಯ ಎಸಗುತ್ತಿದ್ದರು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಹರಿರಾಂ ಶಂಕರ್, ಎಸಿಪಿ ಮಹೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಪೊಲೀಸರಿಗೆ ಸವಾಲಾಗಿದ್ದ ಸರಗಳ್ಳತನ- 6 ತಂಡಗಳಲ್ಲಿ ಪೊಲೀಸ್ ಕಾರ್ಯಾಚರಣೆ
ನಗರದಲ್ಲಿ ಕಳೆದ ನಾಲ್ಕು ತಿಂಗಳಿನಿಂದೀಚೆಗೆ ನಡೆದಿದ್ದ ಸರಳ್ಳತನ ಅತ್ಯಂತ ವ್ಯವಸ್ಥಿತವಾಗಿ, ಸಿಸಿಟಿವಿ ಕ್ಯಾಮರಾಗಳಿಲ್ಲದ ಪ್ರದೇಶಗಳನ್ನು ಗುರುತಿಸಿಕೊಂಡೇ ನಗರದ ಭಾಗದಲ್ಲಿಯೇ ನಡೆದಿದ್ದ ಕಾರಣ ಆರೋಪಿಗಳನ್ನು ಹುಡುಕುವುದು ಪೊಲೀಸರ ಪಾಲಿಗೆ ಸವಾಲಾಗಿತ್ತು. ಆದರೆ ಕಳೆದ ಒಂದು ತಿಂಗಳಿನಿಂದ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ 60 ಸಿಬ್ಬಂದಿ ಆರಕ್ಕೂ ಅಧಿಕ ತಂಡ ಶ್ರಮ ವಹಿಸಿದ ಕಾರಣ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು.
ಪೊಲೀಸ್ ತಂಡಕ್ಕೆ ಬಹುಮಾನ ಘೋಷಣೆ
ನಗರದಲ್ಲಿ ಭಾರೀ ಸಂಚಲನ, ಆತಂಕಕ್ಕೆ ಕಾರಣವಾಗಿದ್ದ ಸರಗಳ್ಳತನ ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪೊಲೀಸ್ ತಂಡಕ್ಕೆ 25000 ರೂ. ಬಹುಮಾನವನ್ನು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಈ ಸಂದರ್ಭ ಘೋಷಿಸಿದರು.ಕಾವೂರು, ಮಾಲೆಮಾರ್, ಚಿಲಿಂಬಿ, ಮೇರಿಹಿಲ್, ಕದ್ರಿ, ಡೊಂಗರಕೇರಿ ಮೊದಲಾದ ಪ್ರದೇಶಗಳಲ್ಲಿ ಕೃತ್ಯ ನಡೆಸಿದ್ದು, 2021ರ ಜುಲೈನಲ್ಲಿ ಬರ್ಕೆ ಠಾಣಾ ವ್ಯಾಪ್ತಿಯಲ್ಲಿ ಪ್ರಥಮ ಸರಗಳ್ಳತನ ಪ್ರಕರಣ ನಡೆಸಲಾಗಿತ್ತು. ಬಜ್ಪೆ ಠಾಣಾಧಿಕಾರಿ ಮೊದಲ ಆರೋಪಿಯನ್ನು ಪತ್ತೆ ಹಚ್ಚುವುದರೊಂದಿಗೆ ಪ್ರಕರಣವನ್ನು ಬೇಧಿಸಲು ಸಾಧ್ಯವಾಗಿದೆ. ಕ್ಲಿಷ್ಟಕರವಾದ ಪ್ರಕರಣವನ್ನು ಬೇಧಿಸುವಲ್ಲಿ ಡಿಸಿಪಿಗಳ (ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ಮತ್ತು ಸಂಚಾರ) ಉಸ್ತುವಾರಿಯಲ್ಲಿ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಎನ್. ಮಹೇಶ್ ಕುಮಾರ್, ಕೇಂದ್ರ ಉಪ ವಿಭಾಗದ ಎಸಿಪಿ ಪರಮೇಶ್ವರ ಹೆಗ್ಡೆ ನೇತೃತ್ವದಲ್ಲಿ ಉತ್ತರ ಮತ್ತು ಕೇಂದ್ರ ಉಪ ವಿಭಾಗ ವ್ಯಾಪ್ತಿಯ ನಿರೀಕ್ಷಕರು ಹಾಗೂ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿ ತಂಡ ಶ್ರಮ ವಹಿಸಿದೆ ಎಂದು ಪೊಲೀಸ್ ಆಯುಕ್ತ ಶ್ಲಾಘನೆ ವ್ಯಕ್ತಪಡಿಸಿದರು.







