ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸಿಂಚನಾಲಕ್ಷ್ಮಿ ವಿಕಲಚೇತನ ವಿಭಾಗದಲ್ಲಿ ದ್ವಿತೀಯ ರ‍್ಯಾಂಕ್
ನೀಟ್ ಫಲಿತಾಂಶ ಪ್ರಕಟ

ಪುತ್ತೂರು: ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕಾಗಿ ಕೇಂದ್ರ ಸರಕಾರವು ನಡೆಸಿದ 2021ರ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸಿಂಚನಾಲಕ್ಷ್ಮಿ 'ಪಿಡಬ್ಲ್ಯೂಡಿ' ಕೆಟಗರಿ (ವಿಕಲ ಚೇತನ ವಿಭಾಗ)ಯಲ್ಲಿ ರಾಷ್ಟ್ರಮಟ್ಟದಲ್ಲಿ ಎರಡನೇ ರ‍್ಯಾಂಕ್ ಗಳಿಸುವುದರ ಮೂಲಕ ದ.ಕ. ಜಿಲ್ಲೆಯಲ್ಲೇ ಅಮೋಘ ಸಾಧನೆಗೈದ ವಿದ್ಯಾರ್ಥಿನಿಯಾಗಿದ್ದಾರೆ.
ಈಕೆ ನೀಟ್ ಪರೀಕ್ಷೆಯಲ್ಲಿ 720 ಅಂಕಗಳಲ್ಲಿ 658 ಅಂಕಗಳನ್ನು ಪಡೆದು ಅಖಿಲ ಭಾರತ ಮಟ್ಟದಲ್ಲಿ 2856ನೇ ರ‍್ಯಾಂಕ್, ಕೆಟಗರಿ ವಿಭಾಗದಲ್ಲಿ 1611ನೇ ರ‍್ಯಾಂಕ್, ಪಿಡಬ್ಲ್ಯೂಡಿ ಕೆಟಗರಿ ವಿಭಾಗದಲ್ಲಿ ಎರಡನೇ ರ‍್ಯಾಂಕ್ ಗಳಿಸಿರುತ್ತಾರೆ.
ಕೃಷಿ ಕುಟುಂಬದಿಂದ ಬಂದಿರುವ ಸಿಂಚನಾಲಕ್ಷ್ಮೀ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಸರಣಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಎಲ್ಲವನ್ನೂ ಸವಾಲಾಗಿ ತೆಗೆದುಕೊಂಡು ಈಗ ನೀಟ್ ಪರೀಕ್ಷೆಯಲ್ಲೂ ತನ್ನ ಸಾಮರ್ಥ್ಯವನ್ನು ತೋರಿಸಿದ್ದಾರೆ. ಈ ಮೂಲಕ ದೇಶದ ಅಗ್ರಮಾನ್ಯ ಕಾಲೇಜಿನಲ್ಲಿ ವೈದಕೀಯ ಶಿಕ್ಷಣ ಪಡೆಯಲು ಅವಕಾಶ ಹೊಂದಿದ್ದಾರೆ.
ಈಕೆ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ 96.16 ಶೇ. ಅಂಕ, ಎಗ್ರಿಕಲ್ಚರ್ ಬಿಎಸ್ಸಿಯಲ್ಲಿ 530ನೇ ರ‍್ಯಾಂಕ್ ಮತ್ತು ಇಂಜಿನಿಯರಿಂಗ್ ನಲ್ಲಿ 1582ನೇ ರ‍್ಯಾಂಕ್, ಬಿಎನ್‌ವೈಎಸ್‌ನಲ್ಲಿ 974ನೇ ರ‍್ಯಾಂಕ್ ಗಳಿಸಿದ್ದಾರೆ.
ತನ್ನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ತೆಂಕಿಲದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಪೂರೈಸಿರುವ ಸಿಂಚನಾಲಕ್ಷ್ಮಿ ಪುತ್ತೂರಿನ ಬಂಗಾರಡ್ಕದ ಮುರಳೀಧರ ಭಟ್ ಮತ್ತು ಶೋಭಾ ಬಿ ಅವರ ಪುತ್ರಿ.







