ದವನ ಸೊರಬ, ಪ್ರೇಮಾ ಭಟ್ಟರಿಗೆ ಚಡಗ ನೆನಪಿನ ಪ್ರಶಸ್ತಿ

ದವನ ಸೊರಬ, ಪ್ರೇಮಾ ಭಟ್
ಉಡುಪಿ, ನ.2: ಕೋಟೇಶ್ವರದ ಎನ್ಆರ್ಎಎಂಎಚ್ ಪ್ರಕಾಶನ ಮತ್ತು ಸ್ಥಿತಿಗತಿ ತ್ರೈಮಾಸಿಕ ಪತ್ರಿಕೆಯ ಆಶ್ರಯದಲ್ಲಿ ಕನ್ನಡದ ಹೆಸರಾಂತ ಕಾದಂಬರಿಕಾರ, ಸಂಘಟಕ ಪಾಂಡೇಶ್ವರ ಸೂರ್ಯನಾರಾಯಣ ಚಡಗರ ನೆನಪಿನಲ್ಲಿ ನೀಡುವ ಹನ್ನೆರಡನೆಯ ವರ್ಷದ ಚಡಗ ಕಾದಂಬರಿ ಪ್ರಶಸ್ತಿಗೆ ದವನ ಸೊರಬ ಅವರ ‘ಪರವಶ’ ಕಾದಂಬರಿ ಆಯ್ಕೆಯಾಗಿದೆ.
ಅದೇ ರೀತಿ ಕನ್ನಡದ ಖ್ಯಾತನಾಮ ಕಾದಂಬರಿಕಾರ್ತಿ, ಸಾಹಿತಿ ಪ್ರೇಮಾ ಭಟ್ಟ ಅವರನ್ನು ಈ ಸಾಲಿನ ‘ಚಡಗ ಸಂಸ್ಮರಣಾ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಸ್ಪರ್ಧೆಯ ಸಂಚಾಲಕ ಪ್ರೊ ಉಪೇಂದ್ರ ಸೋಮಯಾಜಿ ತಿಳಿಸಿದ್ದಾರೆ.
ನವೋದಯದ ಕನ್ನಡ ಕಥೆಗಾರಿಕೆಗೆ ಬಹು ಹತ್ತಿರದ ಲಾಲಿತ್ಯ, ಮಲೆನಾಡಿನ ಬದುಕಿನ ಹೃದಯವಂತಿಕೆ ಮತ್ತು ಬಹುತೇಕ ಕಾವ್ಯವೇ ಅನ್ನಿಸಿಬಿಡುವ ಆಕೃತಿಯನ್ನು ಅವಲಂಬಿಸಿದ, ಮರೆಯಾಗುತ್ತಿರುವ ಮಲೆನಾಡಿನ ಹಳ್ಳಿಗಾಡಿನ ಸುಮಾರು ಅರವತ್ತು ಪಾತ್ರಗಳನ್ನು ಹದಗೆಡದಂತೆ ಬಳಸಿಕೊಳ್ಳುವ ‘ಪರವಶ’ ಕಾದಂಬರಿ ದವನ ಸೊರಬ ಇವರ ಮೂರನೆಯ ಕಾದಂಬರಿ. ಮನೆತನದ ದುರಂತವನ್ನು ನಿಸರ್ಗನಾಶದಿಂದಾಗುವ ದುರಂತದ ಪರ್ಯಾಯ ವಾಚಕವಾಗಿ ಚಿತ್ರಿಸುವ, ಕಥೆ ಹೇಳಲು ಬಳಸುವ ಭೌತಿಕ ವಿವರಗಳ ಮತ್ತು ಭಾಷೆಯ ಧ್ವನಿಶಕ್ತಿಯ ಸಾಧ್ಯತೆಗಳನ್ನು ಸಮರ್ಥವಾಗಿಯೇ ಬಳಸಿಕೊಂಡಿರುವ ಸಹಜ ಸೊಬಗನ್ನು ಗುರುತಿಸಿ, ಈ ಕಾದಂಬರಿಯನ್ನು ಈ ವರ್ಷದ ಚಡಗ ಕಾದಂಬರಿ ಪುರಸ್ಕಾರಕ್ಕೆ ಆಯ್ಕೆಮಾಡಲಾಗಿದೆ ಎಂದು ಮೂವರು ತೀರ್ಪುಗಾರರ ಆಯ್ಕೆ ಸಮಿತಿ ತಿಳಿಸಿದೆ.
ಪ್ರಶಸ್ತಿಯು ಪ್ರಶಸ್ತಿಪತ್ರ, ಸ್ಮರಣಿಕೆ ಮತ್ತು ಹತ್ತು ಸಾವಿರ ರೂ. ನಗದು ಬಹುಮಾನವನ್ನು ಒಳಗೊಂಡಿದೆ. ಪ್ರಶಸ್ತಿಯನ್ನು ಲೇಖಕಿ ದವನ ಸೊರಬ ಇವರಿಗೆ ನವೆಂಬರ್ ತಿಂಗಳಲ್ಲಿ ಕೋಟದಲ್ಲಿ ಆಯೋಜಿಸಲಾಗುವ ಸಾರ್ವಜನಿಕ ಸಮಾರಂಭದಲ್ಲಿ ನೀಡಲಾಗುತ್ತದೆ.
ಸೂರ್ಯನಾರಾಯಣ ಚಡಗರ ಸಾಹಿತ್ಯ ಒಡನಾಡಿಯಾಗಿದ್ದ ಹಿರಿಯ ಲೇಖಕಿ ಪ್ರೇಮಾ ಭಟ್ ಇವರ ಜೀವಮಾನ ಸಾಧನೆಯನ್ನು ಪರಿಗಣಿಸಿ, ಅವರನ್ನು ಚಡಗ ಸಂಸ್ಮರಣಾ ಪುರಸ್ಕಾರವನ್ನಿತ್ತು ಗೌರಸಲಾಗುವುದೆಂದು ಪ್ರಶಸ್ತಿ ಸಮಿತಿ ಅಧ್ಯಕ್ಷ ಡಾ.ಭಾಸ್ಕರ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







