ವಿಶ್ವಕಪ್:ಬಾಂಗ್ಲಾವನ್ನು ಸುಲಭವಾಗಿ ಸೋಲಿಸಿದ ದಕ್ಷಿಣ ಆಫ್ರಿಕಾ

photo: ICC
ಅಬುಧಾಬಿ: ಏಕಪಕ್ಷೀಯವಾಗಿ ಸಾಗಿದ ಐಸಿಸಿ ಟ್ವೆಂಟಿ-20 ವಿಶ್ವಕಪ್ ನ ಸೂಪರ್-12ರ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶವನ್ನು 6 ವಿಕೆಟ್ ಗಳ ಅಂತರದಿಂದ ಸುಲಭವಾಗಿ ಸೋಲಿಸಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ತಂಡವು ಕೇವಲ 84 ರನ್ ಗಳಿಸಿ ಸರ್ವಪತನವಾಯಿತು. ಅನ್ರಿಚ್ ನೋಟ್ಜೆ(3-8), ಕಾಗಿಸೊ ರಬಾಡ(3-20)ಹಾಗೂ ತಬ್ರೈಝ್ ಶಂಸಿ(2-21) ಬೌಲಿಂಗ್ ದಾಳಿಗೆ ತತ್ತರಿಸಿದ ಬಾಂಗ್ಲಾದೇಶದ ಪರವಾಗಿ ಮಹೆದಿ ಹಸನ್(27) ಅಗ್ರ ಸ್ಕೋರರ್ ಎನಿಸಿಕೊಂಡರು. ಆರಂಭಿಕ ಬ್ಯಾಟ್ಸ್ ಮನ್ ಲಿಟನ್ ದಾಸ್(24), ಶಮೀಮ್ ಹೊಸೈನ್(11)ಎರಡಂಕೆಯ ಸ್ಕೋರ್ ಗಳಿಸಿದರು. ಸೌಮ್ಯ ಸರ್ಕಾರ್,ಮುಶ್ಫಿಕುರ್ರಹೀಂ,ಆಫಿಫ್ ಹೊಸೈನ್ ಹಾಗೂ ನಸುಮ್ ಅಹ್ಮದ್ ರನ್ ಖಾತೆ ತೆರಯಲು ವಿಫಲರಾದರು.
ಗೆಲ್ಲಲು 85 ರನ್ ಗುರಿ ಪಡೆದ ದ. ಆಫ್ರಿಕಾ 13.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿದೆ. ನಾಯಕ ಟೆಂಬ ಬವುಮಾ(ಔಟಾಗದೆ 31), ರಸ್ಸಿ ವ್ಯಾನ್ ಡರ್(22) ಹಾಗೂ ಕ್ವಿಂಟನ್ ಡಿಕಾಕ್(16) ತಂಡದ ಗೆಲುವಿಗೆ ನೆರವಾದರು.