ಬೆಳ್ತಂಗಡಿ; ಹಲ್ಲೆ, ಮಾನಹಾನಿ ಪ್ರಕರಣ: ಆರೋಪಿಗಳಿಗೆ 2 ವರ್ಷ ಜೈಲು ಶಿಕ್ಷೆ, ದಂಡ

ಮಂಗಳೂರು, ನ.2: ಬೆಳ್ತಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2016ರಲ್ಲಿ ನಡೆದಿದ್ದ ಹಲ್ಲೆ, ಮಾನಹಾನಿ ಪ್ರಕರಣದ ಆರೋಪಿಗಳಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಸಪ್ಪ ಬಾಲಪ್ಪ ಜಕಾತಿ ಅವರು 2 ವರ್ಷ ಜೈಲು ಶಿಕ್ಷೆ ಮತ್ತು 2,500 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ನೌಶಾದ್, ಅಬೂಬಕರ್ ಮತ್ತು ಮುಹಮ್ಮದ್ ಹನೀಫ್ ಶಿಕ್ಷೆಗೊಳಗಾದವರು.
ನೌಶಾದ್ ಮಹಿಳೆಯೋರ್ವರಿಗೆ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಮಹಿಳೆಯ ಪತಿ ಪ್ರಶ್ನಿಸಿದಾಗ ನೌಶಾದ್ ಆತನ ತಂದೆ ಅಬೂಬಕರ್, ಬಾವ ಮುಹಮ್ಮದ್ ಹನೀಫ್ ಎಂಬವರನ್ನು ಕರೆದುಕೊಂಡು ಮಹಿಳೆಯ ಮನೆಯಂಗಳಕ್ಕೆ ಬಂದು ಮಹಿಳೆಯ ಪತಿಗೆ ಕಲ್ಲಿನಿಂದ ಹಾಗೂ ಕೈಯಿಂದ ಹಲ್ಲೆ ನಡೆಸಿ, ಮಹಿಳೆಯ ಮಾನಹಾನಿ ಮಾಡಿದ್ದರು. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನ್ಯಾಯಾಲಯವು 14 ಮಂದಿ ಸಾಕ್ಷಿದಾರರ ವಿಚಾರಣೆ ನಡೆಸಿದ್ದು, ಅಪರಾಧ ದೃಢಪಟ್ಟಿರುವುದಾಗಿ ತೀರ್ಪು ನೀಡಿದೆ. ಹಲ್ಲೆ ನಡೆಸಿರುವುದಕ್ಕೆ 3 ತಿಂಗಳು ಜೈಲು ಶಿಕ್ಷೆ, 500 ರೂ. ದಂಡ ಹಾಗೂ ದಂಡ ಪಾವತಿಸಲು ತಪ್ಪಿದರೆ 1 ತಿಂಗಳು ಸಾದಾ ಜೈಲು ಶಿಕ್ಷೆ, ಕಲ್ಲಿನಿಂದ ಹಲ್ಲೆ ನಡೆಸಿರುವುದಕ್ಕೆ 2 ವರ್ಷ ಜೈಲು ಶಿಕ್ಷೆ ಹಾಗೂ 1,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 15 ದಿನ ಸಾದಾ ಜೈಲು ಶಿಕ್ಷೆ, ಮಾನಹಾನಿ ಮಾಡಿರುವುದಕ್ಕೆ 2 ವರ್ಷ ಜೈಲು ಶಿಕ್ಷೆ ಹಾಗೂ 1,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 1 ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಿದೆ.
ದಂಡದ ಹಣದಲ್ಲಿ ಮಹಿಳೆಯ ಗಾಯಾಳು ಪತಿಗೆ 3,000 ರೂ. ಹಾಗೂ ಮಹಿಳೆಗೆ 3,000 ರೂ. ಪರಿಹಾರ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಇವರೀರ್ವರಿಗೂ ಸೂಕ್ತ ಪರಿಹಾರ ನೀಡಲು ನ್ಯಾಯಾಧೀಶರು ಆದೇಶಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ನಾರಾಯಣ ಶೇರಿಗಾರ್ ಯು. ವಾದಿಸಿದ್ದಾರೆ.







