7,965 ಕೋ.ರೂ.ವೆಚ್ಚದಲ್ಲಿ ಶಸ್ತ್ರಾಸ್ತ್ರಗಳು, ಮಿಲಿಟರಿ ಉಪಕರಣಗಳ ಖರೀದಿಗೆ ರಕ್ಷಣಾ ಸಚಿವಾಲಯದ ಅಸ್ತು

ಹೊಸದಿಲ್ಲಿ,ನ.2: ಎಚ್‌ಎಎಲ್‌ನಿಂದ 12 ಲಘು ಬಹುಪಯೋಗಿ ಹೆಲಿಕಾಪ್ಟರ್‌ಗಳು ಸೇರಿದಂತೆ 7,965 ಕೋ.ರೂ.ವೆಚ್ಚದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ಉಪಕರಣಗಳ ಖರೀದಿಗೆ ರಕ್ಷಣಾ ಸಚಿವಾಲಯವು ಮಂಗಳವಾರ ಅನುಮೋದನೆ ನೀಡಿದೆ.
ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಖರೀದಿ ಮಂಡಳಿ (ಡಿಎಸಿ)ಯ ಸಭೆಯಲ್ಲಿ ಖರೀದಿ ಪ್ರಸ್ತಾವಗಳಿಗೆ ಒಪ್ಪಿಗೆ ನೀಡಲಾಯಿತು ಎಂದು ಸಚಿವಾಲಯವು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
12 ಹೆಲಿಕಾಪ್ಟರ್‌ಗಳ ಜೊತೆಗೆ ಬಿಇಎಲ್‌ನಿಂದ ಲಿಂಕ್ಸ್ ಯು2 ನೇವಲ್ ಗನ್‌ಫೈರ್ ಕಂಟ್ರೋಲ್ ಸಿಸ್ಟಮ್‌ಗಳ ಖರೀದಿಗೂ ಒಪ್ಪಿಗೆ ನೀಡಲಾಗಿದೆ. ಇವು ಯುದ್ಧ ನೌಕೆಗಳ ಸಾಮರ್ಥ್ಯಗಳನ್ನು ಹೆಚ್ಚಿಸಲಿವೆ.
ನೌಕಾಪಡೆಯ ಬೇಹುಗಾರಿಕೆ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಕರಾವಳಿ ಕಣ್ಗಾವಲನ್ನು ಬಲಗೊಳಿಸಲು ಎಚ್‌ಎಎಲ್‌ನಿಂದ ಡೋರ್ನಿಯರ್ ವಿಮಾನಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವಕ್ಕೂ ಡಿಎಸಿ ಅನುಮತಿ ನೀಡಿದೆಎಂದು ಹೇಳಿಕೆಯಲ್ಲಿ ತಿಳಿಸಿದೆ.
‘ಆತ್ಮನಿರ್ಭರ ಭಾರತ’ಚಿಂತನೆಗೆ ಹೆಚ್ಚಿನ ಒತ್ತು ನೀಡಲು ನೌಕಾಪಡೆಗಾಗಿ ಜಾಗತಿಕ ಮಟ್ಟದಲ್ಲಿ ಗನ್‌ಗಳ ಖರೀದಿಯನ್ನು ಕೈಬಿಡಲಾಗಿದೆ ಮತ್ತು ಬಿಎಚ್‌ಇಎಲ್ ತಯಾರಿಸುತ್ತಿರುವ,ಭಾರತೀಯ ನೌಕಾಪಡೆಯ ಯುದ್ಧನೌಕೆಗಳಿಗೆ ಅಳವಡಿಸಲಾಗುವ ಸೂಪರ್ ರ್ಯಾಪಿಡ್ ಗನ್ ವೌಂಟ್(ಎಸ್‌ಆರ್‌ಜಿಎಂ)ಗಳ ಜೊತೆಗೆ ಗನ್‌ಗಳಿಗೂ ಬೇಡಿಕೆ ಸಲ್ಲಿಸಲಾಗಿದೆ ಎಂದು ಹೇಳಿಕೆಯು ತಿಳಿಸಿದೆ.
ಈ ಎಲ್ಲ ಖರೀದಿ ಪ್ರಸ್ತಾವಗಳು ‘ಮೇಕ್ ಇನ್ ಇಂಡಿಯಾ’ದಡಿ ದೇಶಿಯ ವಿನ್ಯಾಸ,ಅಭಿವೃದ್ಧಿ ಮತ್ತು ತಯಾರಿಕೆ ಒತ್ತು ನೀಡಲಿವೆ ಎಂದು ಅದು ಹೇಳಿದೆ.







