ಪತಿಗೆ ಅಶ್ಲೀಲ ಚಿತ್ರ ನೋಡುವ ಚಟ: ಕೋರ್ಟ್ ಮೆಟ್ಟಿಲೇರಿದ ಪತ್ನಿ

ಸಾಂದರ್ಭಿಕ ಚಿತ್ರ
ಬೆಂಗಳೂರು, ನ.2: ಪೋರ್ನ್ ವೆಬ್ಸೈಟ್ ಚಟಕ್ಕೆ ಬಿದ್ದ ಗಂಡನನ್ನು ಪ್ರಶ್ನಿಸಿದ್ದಕ್ಕೆ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ಸಂಬಂಧ ನಗರದ 1ನೆ ಎಸಿಎಂಎಂ ಕೋರ್ಟ್, ಪತಿಯ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶಿಸಿದೆ.
ಜಯನಗರದ ಮಹಿಳೆಯೊಬ್ಬರು ತನ್ನ ಪತಿ ಪೋರ್ನ್ ಸೈಟ್ ನೋಡುವ ಹಾಗೂ ವೇಶ್ಯೆಯರೊಂದಿಗೆ ಮೊಬೈಲ್ ಚಾಟ್ ಮಾಡುವ ದುರಭ್ಯಾಸ ಬೆಳೆಸಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ತನಗೆ ಕಿರುಕುಳ ನೀಡುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರಿಗೆ ಆದೇಶಿಸಬೇಕು ಎಂದು ಕೋರಿ ಪಿಸಿಆರ್ ದಾಖಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಪತಿಯ ವಿರುದ್ಧ ದೂರು ದಾಖಲಿಸಿ ತನಿಖೆ ನಡೆಸುವಂತೆ ಬಸವನಗುಡಿ ಮಹಿಳಾ ಠಾಣೆ ಪೆÇಲೀಸರಿಗೆ ನಿರ್ದೇಶಿಸಿದೆ.
ಪ್ರಕರಣವೇನು: ಮಹಿಳೆ 2019ರ ನ.11ರಂದು ಆರೋಪಿತ ವ್ಯಕ್ತಿಯೊಂದಿಗೆ ಮದುವೆಯಾಗಿದ್ದರು. ಈ ವೇಳೆ 2 ಲಕ್ಷ ಹಣ ಹಾಗೂ 1 ಲಕ್ಷ ಮೌಲ್ಯದ ಒಡವೆಗಳನ್ನು ವರದಕ್ಷಿಣೆಯಾಗಿ ನೀಡಿದ್ದರು. ಮದುವೆಯಾದ ಕೆಲ ಸಮಯದಲ್ಲೇ ಪತಿ ಪೋರ್ನ್ ವಿಡಿಯೋಗಳ ಚಟಕ್ಕೆ ಬಿದ್ದಿರುವುದು ಬೆಳಕಿಗೆ ಬಂದಿತ್ತು.
ಈ ಕುರಿತು ಮಹಿಳೆ, ಪತಿಯ ಪೋಷಕರಿಗೆ ದೂರು ಹೇಳಿದ್ದರು. ಮೊದಲಿಗೆ ಆತನ ಪೋಷಕರು ತಪ್ಪು ತಿದ್ದಿಕೊಳ್ಳಲು ಒಂದು ಅವಕಾಶ ನೀಡುವಂತೆ ತಿಳಿಸಿ, ಮಗನಿಗೂ ಬುದ್ಧಿ ಹೇಳಿದ್ದರು. ನಂತರದ ದಿನಗಳಲ್ಲಿಯೂ ಪತಿ ತನ್ನ ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳಲಿಲ್ಲ.
ಈ ಕುರಿತು ಪ್ರಶ್ನಿಸಿದ್ದಕ್ಕೆ ಕಿರುಕುಳ ನೀಡಲು ಪ್ರಾರಂಭಿಸಿದರು. ಜೊತೆಗೆ ಹಳಸಿದ ಊಟ ಕೊಡುತ್ತಿದ್ದರು. ಇತ್ತೀಚೆಗೆ ಪತಿ ತಾನು ವಿಚ್ಛೇದಿತ ಎಂದು ಹೇಳಿಕೊಂಡು ಮ್ಯಾಟ್ರಿಮೊನಿಯಲ್ ವೆಬ್ಸೈಟ್ನಲ್ಲಿ ತನ್ನ ಪ್ರೊಫೈಲ್ ಹಾಕಿಕೊಂಡಿದ್ದಾರೆ. ಈ ಮೂಲಕ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ ಬಸವನಗುಡಿ ಮಹಿಳಾ ಠಾಣೆ ಪೆÇಲೀಸರು ಆರೋಪಿ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ, ಕೌಟುಂಬಿಕ ಕಿರುಕುಳ ಹಾಗೂ ಐಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.







