ಸಪ್ತಾಹದ ರಾಜ್ಯಮಟ್ಟದ ಕಾರ್ಯಕ್ರಮ: ರಾಜೇಂದ್ರ ಕುಮಾರ್
ನ.15ರಂದು 68ನೆ ಅಖಿಲ ಭಾರತ ಸಹಕಾರ

ಉಡುಪಿ, ನ.2: 68ನೆ ಅಖಿಲ ಭಾರತ ಸಹಕಾರ ಸಪ್ತಾಹದ ಎರಡನೇ ದಿನದ ರಾಜ್ಯ ಮಟ್ಟದ ಕಾರ್ಯಕ್ರಮವು ನ.15ರಂದು ಉಡುಪಿಯಲ್ಲಿ ನಡೆಯಲಿದ್ದು ಇದಕ್ಕೆ ಬೇಕಾದ ಎಲ್ಲ ರೀತಿಯ ಪೂರ್ವಸಿದ್ಧತೆಗೆ ಕ್ರಮ ವಹಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.
ನಗರದ ಹೋಟೆಲ್ ಡಯಾನ ಸಭಾಂಗಣದಲ್ಲಿ ಏರ್ಪಡಿಸಲಾದ ಈ ಕುರಿತ ಪೂರ್ವ ಭಾವಿ ಸಭೆಯ ಬಳಿಕ ಮಾತನಾಡಿದ ಅವರು, ಅವಿಭಜಿತ ದ.ಕ. ಜಿಲ್ಲೆಗಳ ಎಲ್ಲ ಸಹಕಾರಿಗಳ ನೇತೃತ್ವದಲ್ಲಿ ಈ ಕಾರ್ಯ ನಡೆಯಲಿದ್ದು, ಸುಮಾರು 10ಸಾವಿರ ಮಂದಿ ಸೇರುವ ನಿರೀಕ್ಷೆ ಹೊಂದಿದ್ದೇವೆ ಎಂದು ತಿಳಿಸಿದರು.
ಬೆಳಗ್ಗೆ 8.30ಕ್ಕೆ ನಗರದ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ, ಅಲ್ಲಿಂದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದವರೆಗೆ ಮೆರವಣಿಗೆ ನಡೆಯಲಿದೆ. ಅದೇ ರೀತಿ 500 ದ್ವಿಚಕ್ರ ವಾಹನಗಳ ರ್ಯಾಲಿ, ಸ್ತಬ್ಧಚಿತ್ರಗಳು, ಕಳಸ ಹೊತ್ತ ಮಹಿಳೆಯರು ಸೇರಿದಂತೆ ಒಟ್ಟು 5000 ಮಂದಿ ಮೆರವಣಿಗೆ ಯಲ್ಲಿ ಸಾಗಿಬರಲಿರುವರು ಎಂದರು
ಈ ಕಾರ್ಯಕ್ರಮದಲ್ಲಿ ಸಹಕಾರಿ ಸಚಿವ ಎಸ್‌ಟಿ ಸೋಮಶೇಖರ್, ಮಹಾಮಂಡಲದ ಅಧ್ಯಕ್ಷ ಜಿ.ಟಿ.ದೇವೇಗೌಡ, ಸಚಿವರಾದ ಶೋಭಾ ಕರಂದ್ಲಾಜೆ, ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಅಂಗಾರ, ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಜಿಲ್ಲೆಯ ಎಲ್ಲ ಶಾಕರುಗಳು ಭಾಗವಹಿಸಲಿರುವರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ, ಮಹೇಶ್ ಹೆಗ್ಡೆ, ರಾಜು ಪೂಜಾರಿ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಅಶೋಕ್ ಕುಮಾರ್ ಶೆಟ್ಟಿ, ಸಹರಕಾರ ಸಂಘಗಳ ಉಪನಿಬಂಧಕ ಪ್ರವೀಣ್ ನಾಯಕ್, ಪ್ರಮುಖರಾದ ದಿವಾಕರ ಶೆಟ್ಟಿ ಕಾಪು, ಎಸ್.ಕೆ.ಮಂಜುನಾಥ್, ರಾಜೇಶ್ ರಾವ್, ಅಶೋಕ್ ಕುಮಾರ್ ಬಲ್ಲಾಳ್, ಎಸ್.ಟಿ.ಸುರೇಶ್, ಗೋಪಾಲಕೃಷ್ಣ ಕಾಮತ್, ಕುಂದಾಪುರ ಸಹಾಯಕ ನಿಬಂಧಕ ಅರುಣ್ ಕುಮಾರ್, ಕೆ.ಮಲ್ಲಯ್ಯ ಮೊದಲಾದವರು ಉಪಸ್ಥಿತರಿದ್ದರು.







