ಇ-ಕೆವೈಸಿಗೆ ನ.30ರವರೆಗೆ ಅವಕಾಶ
ಉಡುಪಿ, ನ.2: ಉಡುಪಿ ಜಿಲ್ಲೆಯಲ್ಲಿ ಈವರೆಗೆ ಇ-ಕೆವೈಸಿ ಆಗದೇ ಇರುವ ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡಲು ಮತ್ತೊಂದು ಅವಕಾಶ ಕಲ್ಪಿಸ ಲಾಗಿದೆ. ಇದು ಕೊನೆಯ ಅವಕಾಶವಾಗಿರುವುದರಿಂದ ಇ-ಕೆವೈಸಿ ಆಗದೇ ಇರುವ ಪಡಿತರ ಚೀಟಿದಾರರು ನ.1ರಿಂದ 30ನೇ ತಾರೀಕಿನೊಳಗೆ ಇದನ್ನು ಮಾಡಿಸಲು ಅವಕಾಶ ನೀಡಲಾಗಿದೆ.
ಇಂಥ ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ತಮ್ಮ ಬೆರಳಚ್ಚು ನೊಂದಾಯಿಸಿ ಕೊಳ್ಳುವಂತೆ (ಆಧಾರ್ ದೃಢೀಕರಣ ಇ-ಕೆವೈಸಿ) ತಿಳಿಸಿದೆ. ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ಪಡಿತರ ಚೀಟಿದಾರರು ತಮ್ಮ ಜಾತಿ ಪ್ರಮಾಣ ಪತ್ರವನ್ನು ಹಾಗೂ ಅನಿಲ ಸಂಪರ್ಕ ಹೊಂದಿರುವ ಪಡಿತರ ಚೀಟಿದಾರರು ತಮ್ಮ ಅನಿಲ ಸಂಪರ್ಕದ ಮಾಹಿತಿಯನ್ನು ಹಾಗೂ ತಮ್ಮ ಮೊಬೈಲ್ ದೂರವಾಣಿ ಸಂಖ್ಯೆ ಮಾಹಿತಿಯನ್ನು ಈ-ಕೆವೈಸಿ ಮಾಡಲು ನ್ಯಾಯಬೆಲೆ ಅಂಗಡಿಗಳಿಗೆ ಬರುವಾರ ಕಡ್ಡಾಯವಾಗಿ ತರಬೇಕಾಗಿದೆ.
ಇದು ಇ-ಕೆವೈಸಿಗೆ ಅಂತಿಮ ಅವಕಾಶವಾಗಿದ್ದು, ನ.30ನೇ ತಾರೀಕಿನೊಳಗೆ ಇ-ಕೆವೈಸಿ ಮಾಡದೇ ಇರುವ ಪಡಿತರ ಚೀಟಿ ಮತ್ತು ಸದಸ್ಯರ ಬಗ್ಗೆ ಸರಕಾರದ ಸೂಕ್ತ ನಿರ್ದೇಶನದಂತೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





