ಬಹುಸಂಖ್ಯಾತವಾದವು ರಾಜಕೀಯ ಪಿಡುಗು: ಲೇಖಕ-ಇತಿಹಾಸಕಾರ ಮುಕುಲ್ ಕೇಶವನ್

photo:twitter/@THkerala
ತಿರುವನಂತಪುರ,ನ.2: ಬಹುಸಂಖ್ಯಾತವಾದವನ್ನು ‘ರಾಜಕೀಯ ಪಿಡುಗು’ ಎಂದು ಬಣ್ಣಿಸಿರುವ ಲೇಖಕ-ಇತಿಹಾಸಕಾರ ಮುಕುಲ್ ಕೇಶವನ್ ಅವರು,ಇಂತಹ ಪ್ರವೃತ್ತಿಗಳು ವಿಶ್ವಾದ್ಯಂತ ಬಹುತ್ವ ಸಮಾಜಗಳು ಮತ್ತು ಪ್ರಭುತ್ವಗಳ ಅಸ್ತಿತ್ವಕ್ಕೆ ಬೆದರಿಕೆಯಾಗಿವೆ ಎಂದು ಹೇಳಿದ್ದಾರೆ.
ದಿಲ್ಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ಇತಿಹಾಸ ಮತ್ತು ಸಂಸ್ಕೃತಿಯ ಸಹಾಯಕ ಪ್ರೊಫೆಸರ್ ಆಗಿರುವ ಕೇಶವನ್ ಸೋಮವಾರ ವಕ್ಕಂ ವೌಲವಿ ಸ್ಮಾರಕ ಮತ್ತು ಸಂಶೋಧನಾ ಕೇಂದ್ರವು ‘ಬಹುಸಂಖ್ಯಾತವಾದದ ತುಲನಾತ್ಮಕ ತಿಳುವಳಿಕೆ ’ ಕುರಿತು ವಕ್ಕಂನಲ್ಲಿ ಆಯೋಜಿಸಿದ್ದ ವಕ್ಕಂ ವೌಲವಿ ಸ್ಮಾರಕ ಉಪನ್ಯಾಸವನ್ನು ನೀಡುತ್ತಿದ್ದರು.
ದೇಶವೊಂದರ ರಾಜಕೀಯ ಭವಿಷ್ಯವನ್ನು ಜನಾಂಗೀಯ ಅಥವಾ ಧಾರ್ಮಿಕ ಬಹುಮತವು ನಿರ್ಧರಿಸಬೇಕು ಎನ್ನುವುದನ್ನು ಸಂಕೇತಿಸುವ ಬಹುಸಂಖ್ಯಾತವಾದವು ಪಾಕಿಸ್ತಾನ,ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳ ಮೇಲೆ ಅವುಗಳ ಸ್ವಾತಂತ್ರದ ಮೊದಲ ದಶಕದಲ್ಲಿ ಪ್ರತಿಕೂಲ ಪರಿಣಾಮಗಳನ್ನು ಬೀರಿತ್ತು ಎಂದು ಅವರು ಹೇಳಿದರು.
1980ರ ದಶಕದ ಆರಂಭದವರೆಗೂ ಇಂತಹ ಪ್ರವೃತ್ತಿಗಳನ್ನು ಭಾರತವು ಪ್ರತಿರೋಧಿಸಿತ್ತಾದರೂ 1983ರಲ್ಲಿ ಅಸ್ಸಾಮಿನಲ್ಲಿ ನಡೆದಿದ್ದ ನರಮೇಧವು ಬಹುಸಂಖ್ಯಾತವಾದದ ಹೆಗ್ಗುರುತಾಗಿತ್ತು ಮತ್ತು ನಂತರದಲ್ಲಿ 1984ರ ದಿಲ್ಲಿ ಸಿಖ್ ಹತ್ಯಾಕಾಂಡ,ಮುಂಬೈ,ಗುಜರಾತ ಮತ್ತು ಇತರ ಕಡೆಗಳಲ್ಲಿ ದಂಗೆಗಳು ಸಂಭವಿಸಿದ್ದವು ಎಂದು ಕೇಶವನ್ ನುಡಿದರು.







