ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬದ್ಧ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮಂಡ್ಯ: ತುಂಬಿತುಳುಕುತ್ತಿರುವ ಕೃಷ್ಣರಾಜಸಾಗರ (ಕೆಆರ್ ಎಸ್) ಜಲಾಶಯಕ್ಕೆ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಅವರು ಮಂಗಳವಾರ ಬಾಗಿನ ಅರ್ಪಿಸಿ, ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು
ಈ ವೇಳೆ ಮಾತನಾಡಿದ ಸಿಎಂ, ಕುಡಿಯುವ ನೀರಿನ ಯೋಜನೆಯಾದ ಮೇಕೆದಾಟು ಯೋಜನೆ ಕೈಗೆತ್ತಿಕೊಂಡಿದ್ದೇವೆ. ಇದಕ್ಕೆ ತಮಿಳುನಾಡಿನವರು ಕ್ಯಾತೆ ತೆಗೆದು ಸುಪ್ರೀಂಕೋರ್ಟ್‍ಗೆ ಹೋಗಿದ್ದಾರೆ. ನಾವೂ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ. ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಮ್ಮ ಯೋಜನೆ ಪೂರ್ಣಗೊಳಿಸಲು ಬದ್ದರಾಗಿದ್ದೇವೆ ಎಂದು ಸಿಎಂ ಬೊಮ್ಮಾಯಿ ಖಡಕ್ಕಾಗಿ ಹೇಳಿದರು.
ಕಾವೇರಿ ನ್ಯಾಯಮಂಡಳಿ ತೀರ್ಪಿನ ಪ್ರಕಾರ ತಮಿಳುನಾಡಿಗೆ ನೀರು ಕೊಟ್ಟು, ಹೆಚ್ಚುವರಿ ನೀರನ್ನು ಮಾತ್ರ ಬಳಸಿಕೊಳ್ಳಲು ರೂಪಸಿರುವ ಮೇಕೆದಾಟು ಯೋಜನೆ ನ್ಯಾಯ ಸಮ್ಮತ್ತ ಯೋಜನೆ. ಸಂಕಷ್ಟ ಕಾಲದಲ್ಲಿ ಎರಡೂ ರಾಜ್ಯಗಳಿಗೂ ಅನುಕೂಲವಾಗುತ್ತದೆ. ಈ ಬಗ್ಗೆ ಕಾವೇರಿ ನಿರ್ವಹಣಾ ಸಮಿತಿ ಹಾಗೂ ಕಾವೇರಿ ನೀರಾವರಿ ಪ್ರಾಧಿಕಾರದ ಜತೆಯೂ ಚರ್ಚೆ ಮಾಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ರಾಜ್ಯದ 8 ಜಿಲ್ಲೆಗಳ 38 ಲಕ್ಷ ಎಕರೆ ಪ್ರದೇಶಕ್ಕೆ ತಾಯಿ ಕಾವೇರಿ ಮಾತೆ ನೀರನ್ನು ಕೊಟ್ಟು ಅನ್ನ ನೀಡುತ್ತಿದ್ದಾಳೆ. ಕನ್ನಂಬಾಡಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಅದನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ ಎಂದರು.
ಜಲಸಂಪನ್ಮೂಲ ಸಚಿವ ಗೋವಿಂದ ಎಂ ಕಾರಜೋಳ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ತೋಟಗಾರಿಕೆ ಸಚಿವ ಮುನಿರತ್ನ, ಸಂಸದರಾದ ಸುಮಲತಾ ಅಂಬರೀಷ್, ಪ್ರತಾಪ್ ಸಿಂಹ, ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸಿ.ಎಸ್.ಪುಟ್ಟರಾಜು, ತನ್ವೀರ್ ಸೇಠ್, ಎಂ.ಶ್ರೀನಿವಾಸ್, ಕೆ.ಅನ್ನದಾನಿ, ಸುರೇಶ್‍ಗೌಡ, ಅಶ್ವಿನ್‍ಕುಮಾರ್, ಎಚ್.ಬಿ ಮಂಜುನಾಥ್, ಜಿ.ಟಿ ದೇವೇಗೌಡ, ಎಲ್.ನಾಗೇಂದ್ರ, ವಿಧಾನಪರಿಷತ್ ಸದಸ್ಯರಾದ ಕೆ.ಟಿ ಶ್ರೀಕಂಠೇಗೌಡ, ಮರಿತಿಬ್ಬೆಗೌಡ, ಎನ್.ಅಪ್ಪಾಜಿಗೌಡ, ಆರ್.ಧರ್ಮಸೇನ, ಜಿಲ್ಲಾಧಿಕಾರಿ ಎಸ್.ಅಶ್ವಥಿ, ಜಿಪಂ ಸಿಇಒ ದಿವ್ಯಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.







