ಸಿಸಿಬಿ ಪೊಲೀಸರಿಂದ ಐಷಾರಾಮಿ ಕಾರು ಮಾರಾಟ ಪ್ರಕರಣ;ಇಬ್ಬರು ಸಿಸಿಬಿ ಪೊಲೀಸ್ ಅಧಿಕಾರಿಗಳ ಅಮಾನತು ಆದೇಶ ಹಿಂಪಡೆದ ಡಿಜಿಪಿ

ಮಂಗಳೂರು, ನ.2: ನಗರ ಸಿಸಿಬಿ ಪೊಲೀಸರಾಗಿದ್ದ ಸಿಸಿಬಿ ಎಸ್ಸೈ ಕಬ್ಬಾಳರಾಜ್ ಮತ್ತು ಸಿಇಎನ್ ಪಾಂಡೇಶ್ವರ ಠಾಣೆಯಲ್ಲಿ ಇನ್ ಸ್ಪೆಕ್ಟರ್ ಆಗಿದ್ದ ರಾಮಕೃಷ್ಣ ಅವರನ್ನು ಅಮಾನತುಗೊಳಿಸಿದ ಆದೇಶವನ್ನು ಹಿಂಪಡೆಯಲಾಗಿದೆ.
ಕಳೆದ 2020ರ ನವೆಂಬರ್ ತಿಂಗಳಲ್ಲಿ ಹಣ ಡಬ್ಬಿಂಗ್ ಪ್ರಕರಣದಲ್ಲಿ ಬಂಧಿತರಾಗಿದ್ದ ಕೇರಳ ಮೂಲದ ಆರೋಪಿಗಳನ್ನು ಬಿಡುಗಡೆ ಮಾಡಲು ಅವರಲ್ಲಿದ್ದ ಐಷಾರಾಮಿ ಕಾರನ್ನು ಪಡೆದು ಮಾರಾಟ ಮಾಡಿದ್ದಾರೆಂದು ಆರೋಪ ಕೇಳಿಬಂದಿತ್ತು. ಬಳಿಕ ಈ ವಿಚಾರ ಮಾಧ್ಯಮಗಳಲ್ಲಿ ಬಂದು ಭಾರೀ ಚರ್ಚೆಯಾಗಿತ್ತು. ಅದೇ ವೇಳೆಗೆ, ಮಂಗಳೂರಿನ ಹಲವರು ಸಿಸಿಬಿ ಪೊಲೀಸರ ವಿರುದ್ಧ ಆರೋಪ ಹೊರಿಸಿ ಡಿಜಿಪಿಗೆ ದೂರು ನೀಡಿದ್ದರು. ಆಗ ಮಂಗಳೂರಿನಲ್ಲಿ ಕಮಿಷನರ್ ಆಗಿದ್ದ ವಿಕಾಸ್ ಕುಮಾರ್ ವಿರುದ್ಧವೂ ಆರೋಪ ಕೇಳಿಬಂದಿತ್ತು.ಜಾಗ್ವಾರ್ ಮತ್ತು ಬಿಎಂಡಬ್ಲ್ಯು ಕಾರನ್ನು ಬೆಂಗಳೂರಿನ ವ್ಯಕ್ತಿಗೆ ಮಾರಾಟ ಮಾಡಿದ್ದರು ಎನ್ನಲಾಗಿತ್ತು.
ಇದರ ಬೆನ್ನಲ್ಲೇ ಡಿಜಿಪಿ ಪ್ರವೀಣ್ ಸೂದ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪದಲ್ಲಿ ಕಬ್ಬಾಳರಾಜ್ ಮತ್ತು ರಾಮಕೃಷ್ಣ ಹಾಗೂ ಇನ್ನಿಬ್ಬರು ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯದಿಂದ ಅಮಾನತು ಮಾಡಿ, ಒಟ್ಟು ಪ್ರಕರಣದ ಬಗ್ಗೆ ಸಿಐಡಿ ತನಿಖೆಗೆ ಆದೇಶ ಮಾಡಿದ್ದರು. ಫೆಬ್ರವರಿ ಕೊನೆಯ ವಾರದಲ್ಲಿ ಇವರು ಸಸ್ಪೆಂಡ್ ಆಗಿದ್ದರು. ಆದರೆ, ಯಾವುದೇ ಆರೋಪ ಬಂದು ಇಲಾಖಾ ತನಿಖೆಯ ಕಾರಣಕ್ಕೆ ಅಮಾನತುಗೊಂಡರೆ, ಅಂತಹ ಅಧಿಕಾರಿಗಳು ಆರು ತಿಂಗಳ ವರೆಗೆ ಮಾತ್ರ ಅಮಾನತಿನಲ್ಲಿ ಇರುತ್ತಾರೆ. ಆನಂತರ ಸಹಜವಾಗಿಯೇ ಅಮಾನತು ಅವಧಿ ಮುಗಿಯುತ್ತದೆ. ಈ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳು ಅಮಾನತುಗೊಂಡು ಅಕ್ಟೋಬರ್ ತಿಂಗಳಿಗೆ ಎಂಟು ತಿಂಗಲಾಗಿದ್ದು, ಅದರಂತೆ, ಡಿಜಿಪಿ ಪ್ರವೀಣ್ ಸೂದ್ ಅವರನ್ನು ಮತ್ತೆ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದಾರೆಂದು ತಿಳಿದುಬಂದಿದೆ.
ನಿವೃತ್ತಿ ಅಂಚಿನಲ್ಲಿರುವ ರಾಮಕೃಷ್ಣ ಅವರನ್ನು ಮಂಗಳೂರಿನ ಡಿಸಿಆರ್ ಇ (ನಾಗರಿಕ ಹಕ್ಕು ನಿರ್ದೇಶನಾಲಯ) ಯೂನಿಟ್‌ಗೆ ಹಾಗೂ ಕಬ್ಬಾಳರಾಜ್‌ರನ್ನು ರಾಜ್ಯ ಗುಪ್ತಚರ ಇಲಾಖೆಗೆ ವರ್ಗಾಯಿಸಿದ್ದು, ಬೆಂಗಳೂರಿನಲ್ಲಿ ಕರ್ತವ್ಯಕ್ಕೆ ನಿಯೋಜನೆ ಆಗಲಿದ್ದಾರೆ ಎಂದು ತಿಳಿದು ಬಂದಿದೆ.







