ಪುನೀತ್ ಸಮಾಧಿಗೆ ಹಾಲು-ತುಪ್ಪ

ಬೆಂಗಳೂರು, ನ.2: ಪುನೀತ್ ರಾಜ್‍ಕುಮಾರ್ ನಿಧನ ಹಿನ್ನೆಲೆ ಐದನೆ ದಿನವಾದ ಮಂಗಳವಾರ ಅವರ ಕುಟುಂಬ ಸದಸ್ಯರು ಸಮಾಧಿಗೆ ಹಾಲು-ತುಪ್ಪ ಸಮರ್ಪಿಸುವ ಕಾರ್ಯ ನೆರವೇರಿಸಿದ್ದಾರೆ.
ಬೆಳಗ್ಗೆ 11 ಗಂಟೆ ಸುಮಾರಿಗೆ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಪುನೀತ್ ಸಮಾಧಿ ಬಳಿಗೆ ತೆರಳಿದ ರಾಜ್‍ಕುಮಾರ್ ಕುಟುಂಬದ ಸದಸ್ಯರು ಸಮಾಧಿಗೆ ಹಾಲು-ತುಪ್ಪದ ವಿಧಿ-ವಿಧಾನ ಪೂರೈಸಿದರು.
ಪುನೀತ್ ಅವರಿಗೆ ತುಂಬ ಇಷ್ಟವಾದ ಇಡ್ಲಿ, ಮುದ್ದೆ, ನಾಟಿ ಕೋಳಿ ಸಾಂಬಾರು ಸೇರಿದಂತೆ 50 ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಮಾಡಿಕೊಂಡು ಬಂದ ಸಂಬಂಧಿಕರು ಅದನ್ನು ಸಮಾಧಿ ಮೇಲಿಟ್ಟು ಪೂಜೆ ಸಲ್ಲಿಸಿದರು.
ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಅಶ್ವಿನಿ, ಮಕ್ಕಳಾದ ವಂದನಾ, ಧೃತಿ, ಶಿವರಾಜ್‍ಕುಮಾರ್, ಗೀತಾ ಶಿವರಾಜ್‍ಕುಮಾರ್, ಪುತ್ರಿ ನಿವೇದಿತಾ, ರಾಘವೇಂದ್ರ ರಾಜ್‍ಕುಮಾರ್, ಸಹೋದರಿ ಲಕ್ಷ್ಮೀ, ರಾಮ್‍ಕುಮಾರ್ ಕುಟುಂಬ, ಮಾವ ಚಿನ್ನೇಗೌಡ ಕುಟುಂಬ, ಮಧು ಬಂಗಾರಪ್ಪ, ವಿನಯ್ ರಾಘವೇಂದ್ರ, ಯುವರಾಜ್‍ಕುಮಾರ್, ಶ್ರೀಮುರಳಿ, ಮಧುಬಂಗಾರಪ್ಪ, ಸಚಿವ ಗೋಪಾಲಯ್ಯ ಸೇರಿದಂತೆ ಹಲವರು ಹಾಲು-ತುಪ್ಪ ಕಾರ್ಯದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು.
ಅ.29ರಂದು ಪುನೀತ್ ನಿಧನರಾದರು. ಅ.31ರಂದು ಅಂತ್ಯಕ್ರಿಯೆ ನೆರವೇರಿತು. ಮೂರು ದಿನಕ್ಕೆ ಹಾಲು-ತುಪ್ಪ ಕಾರ್ಯ ನೆರವೇರಿಸಬೇಕಿತ್ತು. ಆದರೆ, ಮೂರನೆ ದಿನ ಅಂತ್ಯಕ್ರಿಯೆ ನಡೆದಿದ್ದಕ್ಕೆ ಐದನೆ ದಿನ ಹಾಲು-ತುಪ್ಪ ಕಾರ್ಯ ನಡೆದಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.






.jpg)
.jpg)
.jpg)
.jpg)

