ವಿಶ್ವಕಪ್: ಸತತ ನಾಲ್ಕನೇ ಗೆಲುವಿನೊಂದಿಗೆ ಸೆಮಿ ಫೈನಲ್ ಸ್ಥಾನ ದೃಢಪಡಿಸಿದ ಪಾಕ್

photo: ICC
ಅಬುಧಾಬಿ,ನ.2: ಆರಂಭಿಕ ಬ್ಯಾಟ್ಸ್ ಮನ್ ಗಳಾದ ಮುಹಮ್ಮದ್ ರಿಝ್ವಾನ್(ಔಟಾಗದೆ 79) ಹಾಗೂ ಬಾಬರ್ ಆಝಂ(70) ಮತ್ತೊಂದು ಭರ್ಜರಿ ಜೊತೆಯಾಟ ಹಾಗೂ ಬೌಲರ್ ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಪಾಕಿಸ್ತಾನ ತಂಡ ನಮೀಬಿಯ ವಿರುದ್ಧ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಸೂಪರ್-12ರ ಸುತ್ತಿನ ಪಂದ್ಯದಲ್ಲಿ 45 ರನ್ ಗಳ ಅಂತರದಿಂದ ಗೆಲುವು ಸಾಧಿಸಿದೆ. ಟೂರ್ನಿಯಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸಿದ ಪಾಕಿಸ್ತಾನವು ಸೆಮಿ ಫೈನಲ್ ಸ್ಥಾನ ಖಚಿತಪಡಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನವು 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಪಡೆದ ನಮೀಬಿಯ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತು. ನಮೀಬಿಯ ಪರ ಡೇವಿಡ್ ವೈಸ್ ಔಟಾಗದೆ 43 ಹಾಗೂ ಕ್ರೆಗ್ ವಿಲಿಯಮ್ಸ್ 40 ರನ್ ಗಳಿಸಿದರು. ಪಾಕ್ ಪರವಾಗಿ ಇಮಾದ್ ವಸೀಂ(1-13), ಹಸನ್ ಅಲಿ(1-22), ಹಾರಿಸ್ ರವೂಫ್ (1-25) ಹಾಗೂ ಶಾದಾಬ್ ಖಾನ್ (1-35) ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ ಪರವಾಗಿ ರಿಝ್ವಾನ್(ಔಟಾಗದೆ 79, 50 ಎಸೆತ, 8 ಬೌಂಡರಿ, 4 ಸಿಕ್ಸರ್) ಹಾಗೂ ಆಝಂ(70, 49 ಎಸೆತ, 7 ಬೌಂಡರಿ) ಮೊದಲ ವಿಕೆಟ್ ಗೆ 113 ರನ್ ಜೊತೆಯಾಟ ನಡೆಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.
ಮುಹಮ್ಮದ್ ಹಫೀಝ್ ಔಟಾಗದೆ 32 ರನ್(16 ಎಸೆತ, 5 ಬೌಂಡರಿ) ಗಳಿಸಿ ಪಾಕ್ 2 ವಿಕೆಟಿಗೆ 189 ರನ್ ಗಳಿಸಲು ನೆರವಾದರು.