ಸಿಒಪಿ26 ಸಭೆಯಲ್ಲಿ ಅಧ್ಯಕ್ಷ ಕ್ಸಿಜಿಂಪಿಂಗ್ ಗೆ ವೀಡಿಯೊ ಮೂಲಕ ಭಾಷಣಕ್ಕೆ ಅವಕಾಶ ನೀಡಿಲ್ಲ: ಚೀನಾ ಆಕ್ಷೇಪ

ಬೀಜಿಂಗ್. ನ.2: ಹವಾಮಾನ ಬದಲಾವಣೆ ವಿಷಯದ ಕುರಿತು ಸ್ಕಾಟ್‌ಲ್ಯಾಂಡ್‌ನಲ್ಲಿ ನಡೆದ ಸಿಒಪಿ26 ಸಭೆಯಲ್ಲಿ ಚೀನಾದ ಅಧ್ಯಕ್ಷ ಕ್ಸಿಜಿಂಪಿಂಗ್‌ಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಭಾಷಣಕ್ಕೆ ಅವಕಾಶ ನೀಡಿರಲಿಲ್ಲ. ಆದ್ದರಿಂದ ಅವರು ತಮ್ಮ ಹೇಳಿಕೆಯನ್ನು ಲಿಖಿತ ರೂಪದಲ್ಲಿ ರವಾನಿಸಿದ್ದಾರೆ ಎಂದು ಚೀನಾ ಹೇಳಿದೆ.
ದೇಶಗಳ ಮತ್ತು ಸರಕಾರಗಳ ಉನ್ನತ ಮಟ್ಟದ ಮುಖಂಡರು ಭಾಗವಹಿಸಿದ್ದ ಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕ್ಸಿಜಿಂಪಿಂಗ್ ಅವರ ಲಿಖಿತ ಭಾಷಣವನ್ನು ಓದಿ ಹೇಳಲಾಗಿದೆ. ಪರಸ್ಪರ ವಿಶ್ವಾಸ ಮತ್ತು ನಂಬಿಕೆಯನ್ನು ಬಲಪಡಿಸುವ ವಾಗ್ದಾನವನ್ನು ದೇಶಗಳು ಪಾಲಿಸಬೇಕು ಎಂದು ಚೀನಾದ ಅಧ್ಯಕ್ಷರು ಕರೆ ನೀಡಿದ್ದಾರೆ ಎಂದು ಚೀನಾದ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ವಾಂಗ್ ವೆ್ಬಿನ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬ್ರಿಟನ್, ಸಭೆಯಲ್ಲಿ ಮುಖಂಡರ ವೈಯಕ್ತಿಕ ಉಪಸ್ಥಿತಿ ಇರಬೇಕು ಎಂಬುದು ನಮ್ಮ ಆಶಯವಾಗಿತ್ತು. ವೈಯಕ್ತಿಕವಾಗಿ ಹಾಜರಾಗಲು ಸಾಧ್ಯವಾಗದವರು ತಮ್ಮ ಹೇಳಿಕೆಯನ್ನು ಲಿಖಿತವಾಗಿ ಸಲ್ಲಿಸುವ ಆಯ್ಕೆಯಿತ್ತು ಎಂದಿದೆ. ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಶೂನ್ಯಮಟ್ಟಕ್ಕೆ ಇಳಿಸುವ ಮತ್ತು ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿಗೆ ನಿಯಂತ್ರಿಸುವ ಪ್ಯಾರಿಸ್ ಒಪ್ಪಂದದ ಗುರಿಯನ್ನು ತಲುಪುವ ಕಾರ್ಯತಂತ್ರ ಚರ್ಚಿಸಲು ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಗೋದಲ್ಲಿ ಬ್ರಿಟ್ ನೇತೃತ್ವದಲ್ಲಿ ಈ ಸಭೆ ನಡೆದಿದೆ.
ಸಭೆಯಲ್ಲಿ ಕ್ಸಿಜಿಂಪಿಂಗ್ ಹಾಜರಾಗದಿರುವುದು, ಚೀನಾ ಇನ್ನಷ್ಟು ರಿಯಾಯಿತಿಗೆ ಸಿದ್ಧವಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಹವಾಮಾನದ ವಿಷಯಕ್ಕೆ ಸಂಬಂಧಿಸಿದ ತಜ್ಞರು ಹೇಳಿದ್ದಾರೆ. ಆದರೆ, ಸೌರವಿದ್ಯುತ್ ಮತ್ತು ಪವನ ವಿದ್ಯುತ್‌ಶಕ್ತಿ ಸಾಮರ್ಥ್ಯವನ್ನು 1,200 ಜಿಡಬ್ಲ್ಯುಗೆ ಹೆಚ್ಚಿಸುವುದು, ಕಲ್ಲಿದ್ದಲು ಬಳಕೆಯನ್ನು ನಿಯಂತ್ರಿಸುವುದು ಇತ್ಯಾದಿ ಹಲವು ವಾಗ್ದಾನಗಳನ್ನು ತಾನು ಕಳೆದ ವರ್ಷ ನೀಡಿದ್ದೇನೆ ಎಂದು ಚೀನಾ ಹೇಳಿದೆ.







