ತುರ್ತು ಬಳಕೆಯ ಲಸಿಕೆ ಪಟ್ಟಿಗೆ ಕೊವ್ಯಾಕ್ಸಿನ್ ಸೇರ್ಪಡೆ ಕುರಿತು ಬುಧವಾರ ನಿರ್ಧರಿಸುವ ಸಾಧ್ಯತೆ

ನ್ಯೂಯಾರ್ಕ್, ನ.2: ಕೋವಿಡ್ ಸೋಂಕಿನ ವಿರುದ್ಧದ ಲಸಿಕೆ ಕೊವ್ಯಾಕ್ಸಿನ್ ಅನ್ನು ತುರ್ತು ಬಳಕೆಯ ಪಟ್ಟಿಗೆ ಸೇರಿಸುವ ಬಗ್ಗೆ ಪರಿಶೀಲನೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ(ನ.3) ಸಭೆ ಸೇರಿ ನಿರ್ಧರಿಸುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಟ್ವೀಟ್ ಮಾಡಿದೆ.
ಭಾರತ್ ಬಯೊಟೆಕ್ ಉತ್ಪನ್ನವಾದ ಕೊವ್ಯಾಕ್ಸಿನ್ ಕುರಿತ ಹೆಚ್ಚಿನ ಸ್ಪಷ್ಟನೆ ಕೇಳಿದ್ದ ವಿಶ್ವಸಂಸ್ಥೆಯ ಱತುರ್ತು ಬಳಕೆಯ ಪಟ್ಟಿಗೆ ಸೇರ್ಪಡೆ ಕುರಿತ ತಾಂತ್ರಿಕ ಸಲಹೆಗಾರರ ಸಮಿತಿೞ(ಇಯುಎಲ್) ನವೆಂಬರ್ 3(ಬುಧವಾರ) ಸಭೆ ಸೇರಿ ಭಾರತ್ ಬಯೊಟೆಕ್ ಒದಗಿಸಿದ ಮಾಹಿತಿಯನ್ನು ಪರಿಶೀಲಿಸಿ, ಈ ಲಸಿಕೆಯು ಇಯುಎಲ್ ಮಾನದಂಡಕ್ಕೆ ಅನುಗುಣವಾಗಿದೆಯೇ ಎಂಬುದನ್ನು ನಿರ್ಧರಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೊವ್ಯಾಕ್ಸಿನ್ ಲಸಿಕೆಯು ಕೋವಿಡ್ 19 ಲಕ್ಷಣದ ವಿರುದ್ಧ 77.8% ಪರಿಣಾಮಕಾರಿತ್ವ ಮತ್ತು ಡೆಲ್ಟಾ ರೂಪಾಂತರಿತ ಸೋಂಕಿನ ವಿರುದ್ಧ 65.2% ಪರಿಣಾಮಕಾರಿತ್ವ ಹೊಂದಿದೆ. ಲಸಿಕೆಯ ಪರಿಣಾಮಕಾರಿತ್ವದ 3ನೇ ಹಂತದ ಪರೀಕ್ಷೆಯನ್ನು ಜೂನ್‌ನಲ್ಲಿ ನಡೆಸಿರುವುದಾಗಿ ಭಾರತ್ ಬಯೊಟೆಕ್ ಹೇಳಿದೆ.
ಕೊವ್ಯಾಕ್ಸಿನ್ ಲಸಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆ ಲಸಿಕೆಯ ಪಟ್ಟಿಗೆ ಸೇರ್ಪಡೆಗೊಳಿಸುವ ಕೋರಿಕೆಯ ಬಗ್ಗೆ ಪರಿಶೀಲಿಸಲು ಅಕ್ಟೋಬರ್ 26ರಂದು ಸಭೆ ಸೇರಿದ್ದ ಇಯುಎಲ್, ಇನ್ನಷ್ಟು ಮಾಹಿತಿಯ ಅಗತ್ಯವಿದೆ ಎಂದು ಹೇಳಿತ್ತು.







