ನಿವೃತ್ತಿಯಿಂದ ಹೊರಬರಲು ಯುವರಾಜ್ ಸಿಂಗ್ ನಿರ್ಧಾರ

ಹೊಸದಿಲ್ಲಿ, ನ. 2: ‘ಸಾರ್ವಜನಿಕರ ಒತ್ತಾಯ’ದ ಮೇರೆಗೆ ಮುಂದಿನ ವರ್ಷದ ಫೆಬ್ರವರಿಯಲ್ಲಿ ನಿವೃತ್ತಿಯಿಂದ ಹೊರಬರಲು ಭಾರತದ ಕ್ರಿಕೆಟ್‌ನ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ನಿರ್ಧರಿಸಿದ್ದಾರೆ.
ಅವರು ಎರಡು ವರ್ಷ ಹಿಂದೆ ನಿವೃತ್ತಿ ಘೋಷಿಸಿದ್ದರು.
ಸೋಮವಾರ ತಡರಾತ್ರಿ ಇನ್‌ಸ್ಟಾಗ್ರಾಮ್‌ನಲ್ಲಿ 39 ವರ್ಷದ ಯುವರಾಜ್, ಭಾರತದ ಪರವಾಗಿ ತಾನು ದಾಖಲಿಸಿರುವ ಕೊನೆಯ ಶತಕದ ವೀಡಿಯೊ ತುಣುಕೊಂದನ್ನು ಹಾಕಿದ್ದಾರೆ ಹಾಗೂ ಅದರ ಜೊತೆಗೆ ತಾನು ಕ್ರಿಕೆಟ್‌ಗೆ ಮರಳುವ ಸಾಧ್ಯತೆಯನ್ನು ಸೂಚಿಸುವ ಸಂದೇಶವೊಂದನ್ನೂ ಹಾಕಿದ್ದಾರೆ.
2017ರ ಜನವರಿಯಲ್ಲಿ ಯುವಿ ಕಟಕ್‌ನಲ್ಲಿ ಇಂಗ್ಲೆಂಡ್ ವಿರುದ್ಧ 150 ರನ್‌ಗಳನ್ನು ಬಾರಿಸಿದ್ದರು. ಅದು ಭಾರತದ ಪರ ಅವರು ಸಿಡಿಸಿದ ಕೊನೆಯ ಶತಕವಾಗಿತ್ತು.
‘‘ನಮ್ಮ ವಿಧಿಯನ್ನು ದೇವರು ನಿರ್ಧರಿ ಸುತ್ತಾರೆ. ಸಾರ್ವಜನಿಕರ ಒತ್ತಾಯದ ಮೇರೆಗೆ ಬಹುಶಃ ಫೆಬ್ರವರಿಯಲ್ಲಿ ನಾನು ಪಿಚ್‌ಗೆ ಮರಳುತ್ತೇನೆ. ಈಗ ನನ್ನಲ್ಲಿ ಈ ಯೋಚನೆಯಲ್ಲದೆ ಬೇರೆಯೋಚನೆಯಿಲ್ಲ’’ ಎಂಬುದಾಗಿ ಅವರು ಬರೆದಿದ್ದಾರೆ.
ಆದರೆ, ಅವರು ಮರಳುತ್ತಿರುವುದು ಭಾರತದ ತಂಡಕ್ಕೆ ಆಯ್ಕೆಗೊಳ್ಳುವುದಕ್ಕಾಗಿಯೋ ಅಥವಾ ಟ್ವೆಂಟಿ-20 ಲೀಗ್‌ಗಳಲ್ಲಿ ಆಡುವುದಕ್ಕಾಗಿಯೋ ಎನ್ನುವುದು ಸ್ಪಷ್ಟವಾಗಿಲ್ಲ. 2011ರ ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠರಾಗಿದ್ದ ಅವರು 2019ರ ಜೂನ್‌ನಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು.
2000 ಅಕ್ಟೋಬರ್‌ನಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಯುವರಾಜ್ 304 ಏಕದಿನ ಪಂದ್ಯಗಳು ಮತ್ತು 40 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಹಾಗೂ ಕ್ರಮವಾಗಿ 8,701 ಮತ್ತು 1,900 ರನ್‌ಗಳನ್ನು ಗಳಿಸಿದ್ದಾರೆ. ಅವರು ತನ್ನ ಎಡಗೈ ಸ್ಪಿನ್ ಬೌಲಿಂಗ್ ಮೂಲಕ 111 ಏಕದಿನ ವಿಕೆಟ್‌ಗಳನ್ನು ಪಡೆದಿದ್ದಾರೆ.







