ಫೈಝಾಬಾದ್ ಜಂಕ್ಷನ್ ನಿಲ್ದಾಣಕ್ಕೆ ಅಯೋಧ್ಯಾ ಕಂಟೋನ್ಮೆಂಟ್ ಎಂದು ಮರುನಾಮಕರಣ

ಲಕ್ನೊ: ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶ ಸರಕಾರದ ನಿರ್ಧಾರದ ನಂತರ ಫೈಝಾಬಾದ್ ಜಂಕ್ಷನ್ ರೈಲು ನಿಲ್ದಾಣವನ್ನು ನವೆಂಬರ್ 2 ಮಂಗಳವಾರದಂದು ಅಯೋಧ್ಯಾ ಕಂಟೋನ್ಮೆಂಟ್ ಎಂದು ಮರುನಾಮಕರಣ ಮಾಡಲಾಯಿತು ಎಂದು ಪಿಟಿಐ ವರದಿ ಮಾಡಿದೆ.
ಈ ಹಿಂದೆ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಕಚೇರಿಯ ಟ್ವೀಟ್‌ನಲ್ಲಿ ಕೇಂದ್ರವು ಈ ನಿರ್ಧಾರಕ್ಕೆ ತನ್ನ ಒಪ್ಪಿಗೆ ನೀಡಿದೆ ಹಾಗೂ ಈ ವಿಷಯದಲ್ಲಿ ಅಧಿಸೂಚನೆಯನ್ನು ಹೊರಡಿಸಲು ಉತ್ತರಪ್ರದೇಶ ರಾಜ್ಯ ಆಡಳಿತಕ್ಕೆ ಅಧಿಕಾರ ನೀಡಿದೆ ಎಂದು ಹೇಳಿತ್ತು.
ಉತ್ತರಪ್ರದೇಶ ಸರಕಾರವು ಫೈಝಾಬಾದ್ ಜಿಲ್ಲೆಯ ಹೆಸರನ್ನು ಅಯೋಧ್ಯೆ ಎಂದು ಬದಲಾಯಿಸಿದ ಮೂರು ವರ್ಷಗಳ ನಂತರ ಈ ಹೆಜ್ಜೆ ಇಡಲಾಗಿದೆ.
ಈ ಹಿಂದೆ ಬಿಜೆಪಿ ಸರಕಾರವು ಅಲಹಾಬಾದ್ ಅನ್ನು ಪ್ರಯಾಗ್ ರಾಜ್ ಹಾಗೂ ಮೊಘಲ್ಸರಾಯ್ ರೈಲ್ವೆ ಜಂಕ್ಷನ್ ಅನ್ನು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ಎಂದು ಮರುನಾಮಕರಣ ಮಾಡಿತ್ತು.
ಲಕ್ನೋದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉತ್ತರ ರೈಲ್ವೇ ಪಿಆರ್‌ಒ ದೀಪಕ್ ಕುಮಾರ್, ಉತ್ತರ ರೈಲ್ವೆಯ ಲಕ್ನೋ ವಿಭಾಗದ ಫೈಝಾಬಾದ್ (ಎಫ್‌ಡಿ) ರೈಲು ನಿಲ್ದಾಣದ ಹೆಸರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಯೋಧ್ಯಾ ಕ್ಯಾಂಟ್ (ಸ್ಟೇಷನ್ ಕೋಡ್: ಎವೈಸಿ) ಎಂದು ಬದಲಾಯಿಸಲಾಗಿದೆ ಎಂದು ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.







