ಮಹಾರಾಷ್ಟ್ರ: ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಬಂಧನದಿಂದ ಎನ್‌ಸಿಪಿಗೆ ಹಿನ್ನಡೆ
ಮುಂಬೈ: ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಬಂಧಿಸಿರುವುದು ಎನ್‌ಸಿಪಿಗೆ ವಿಶೇಷವಾಗಿ ಅದರ ಅಧ್ಯಕ್ಷ ಶರದ್ ಪವಾರ್‌ಗೆ ದೊಡ್ಡ ಹಿನ್ನಡೆ ಎಂದು ಪರಿಗಣಿಸಲಾಗಿದೆ.
ಎನ್‌ಸಿಪಿ, ಶಿವಸೇನೆ ಹಾಗೂ ಕಾಂಗ್ರೆಸ್‌ನ ಹಲವಾರು ಪ್ರಮುಖ ನಾಯಕರು ಈಡಿ ಮತ್ತು ಆದಾಯ ತೆರಿಗೆ ಅಧಿಕಾರಿಗಳ ರಾಡಾರ್‌ನಲ್ಲಿದ್ದಾರೆ. ಲೋಕೋಪಯೋಗಿ ಸಚಿವ ಅಶೋಕ್ ಚವ್ಹಾಣ್, ಸಾರಿಗೆ ಸಚಿವ ಅನಿಲ್ ಪರಬ್, ಸೇನಾ ಮುಖಂಡರಾದ ಪ್ರತಾಪ್ ಸರ್ನಾಯಕ್, ಆನಂದರಾವ್ ಅದ್ಸುಲ್ ಹಾಗೂ ಭವನ್ ಗವಾಲಿ, ಎನ್‌ಸಿಪಿ ನಾಯಕ ಏಕನಾಥ್ ಖಾಡ್ಸೆ, ಅವರ ಪತ್ನಿ ಮಂದಾಕಿನಿ ಹಾಗೂ ಅವರ ಪುತ್ರಿ ರೋಹಿಣಿ ಅವರಿಗೆ ಸಂಬಂಧಿಸಿದ ಸಂಸ್ಥೆಗಳನ್ನು ತನಿಖೆ ನಡೆಸಲಾಗುತ್ತಿದೆ.
ಎನ್‌ಸಿಪಿ ವಕ್ತಾರ ಮತ್ತು ಸಚಿವ ನವಾಬ್ ಮಲಿಕ್ ಅವರು ದೇಶಮುಖ್ ಬಂಧನ ಮತ್ತು ಅಜಿತ್ ಪವಾರ್ ವಿರುದ್ಧದ ಐಟಿ ಕ್ರಮಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. "ಇದು ಅಧಿಕಾರದ ಸಂಪೂರ್ಣ ದುರುಪಯೋಗವಾಗಿದೆ. ದೇಶಮುಖ್ ಅವರನ್ನು ಪಿಎಂಎಲ್‌ಎ ಅಡಿಯಲ್ಲಿ ಬಂಧಿಸಲಾಗಿದೆ. ಈ ಹಿಂದೆ ನಮ್ಮ ನಾಯಕ ಛಗನ್ ಭುಜಬಲ್ ಅವರನ್ನೂ ಬಂಧಿಸಲಾಗಿತ್ತು, ಆದರೆ ನ್ಯಾಯಾಲಯ ಅವರಿಗೆ ಕ್ಲೀನ್ ಚಿಟ್ ನೀಡಿತು'' ಎಂದು ಮಲಿಕ್ ಹೇಳಿದ್ದಾರೆ.
“ಐಟಿ ಇಲಾಖೆಯು ಅಜಿತ್ ಪವಾರ್‌ಗೆ ಸಂಬಂಧಿಸಿದ ಆಸ್ತಿಗಳನ್ನು ಜಪ್ತಿ ಮಾಡಿದೆ ಎಂದು ಹೇಳಲಾಗುತ್ತಿದೆ. ಆದರೆ ಅದರಲ್ಲಿ ಸತ್ಯಾಂಶವಿಲ್ಲ. ಆಸ್ತಿ ಎಲ್ಲರಿಗೂ ಸೇರಿದ್ದು, ಅದು ಅಜಿತ್ ಪವಾರ್ ಅವರದ್ದು ಎನ್ನುತ್ತಾರೆ. ಅವರ ಮಾನಹಾನಿಗಾಗಿ ಇದನ್ನು ಮಾಡಲಾಗಿದೆ’’ ಎಂದರು.
ಪಶ್ಚಿಮ ಬಂಗಾಳ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿ ಮೊದಲು ಮಾಡಿತು ಹಾಗೂ ಅದು ವಿಫಲವಾದ ನಂತರ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರಕಾರವನ್ನು ಗುರಿಯಾಗಿಸುತ್ತಿದೆ ಎಂದು ಮಲಿಕ್ ಆರೋಪಿಸಿದರು.
“ನಾವು ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಹೋರಾಡುತ್ತೇವೆ. ಎಂವಿಎ ಸರಕಾರವನ್ನು ಅಸ್ಥಿರಗೊಳಿಸುವ ಯಾವುದೇ ಪ್ರಯತ್ನವನ್ನು ವಿಫಲಗೊಳಿಸಲಾಗುವುದು'' ಎಂದು ಮಲಿಕ್ ಹೇಳಿದ್ದಾರೆ.