ಗುರುಗ್ರಾಮ: ಎಂಟು ಕಡೆಗಳಲ್ಲಿ ನಮಾಝ್ ಸಲ್ಲಿಕೆಗೆ ಅನುಮತಿ ವಾಪಸ್ ಪಡೆದ ಆಡಳಿತ

Photo: NDTV
ಗುರುಗ್ರಾಮ: ಗುರುಗ್ರಾಮದಲ್ಲಿ ನಿಗದಿತ ಸ್ಥಳಗಳಲ್ಲಿ ತೆರೆದ ಪ್ರದೇಶಗಳಲ್ಲಿ ಶುಕ್ರವಾರದ ನಮಾಝ್ ಸಲ್ಲಿಕೆಯನ್ನು ವಿರೋಧಿಸಿ ಕೆಲ ಬಲಪಂಥೀಯ ಸಂಘಟನೆನೆಗಳ ಸದಸ್ಯರ ಸಹಿತ ಸ್ಥಳೀಯರು ಪ್ರತಿಭಟನೆ ನಡೆಸಿದ ನಂತರ ನಾಲ್ಕು ದಿನಗಳ ಹಿಂದೆಯಷ್ಟೇ 26 ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರೆ ಮಂಗಳವಾರ ಜಿಲ್ಲಾಡಳಿತವು ಎಂಟು ಕಡೆಗಳಲ್ಲಿ ನಮಾಝ್ ಸಲ್ಲಿಕೆಗೆ ಅನುಮತಿಯನ್ನು ವಾಪಸ್ ಪಡೆದುಕೊಂಡಿದೆ. ಸ್ಥಳೀಯ ನಿವಾಸಿಗಳು ಮತ್ತು ನಿವಾಸಿಗಳ ಕಲ್ಯಾಣ ಸಂಘಟನೆಗಳ ವಿರೋಧದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ಭವಿಷ್ಯದಲ್ಲಿ ಶುಕ್ರವಾರದ ನಮಾಝ್ ಸಲ್ಲಿಸಬಹುದಾದ ಸ್ಥಳಗಳನ್ನು ಗುರುತಿಸಲು ಗುರುಗ್ರಾಮ ಜಿಲ್ಲಾಧಿಕಾರಿ ಯಶ್ ಗರ್ಗ್ ಅವರು ಉಪವಿಭಾಗೀಯ ಮ್ಯಾಜಿಸ್ಟ್ರೇಟ್, ಓರ್ವ ಎಸಿಪಿ ಶ್ರೇಣಿಯ ಪೊಲೀಸ್ ಅಧಿಕಾರಿ, ಹಿಂದು ಮತ್ತು ಮುಸ್ಲಿಂ ಸಮುದಾಯಗಳ ಸದಸ್ಯರ ಸಮಿತಿಯನ್ನು ಕೂಡ ರಚಿಸಿದ್ದಾರೆ.
ಬುಧವಾರ ಈ ಸಮಿತಿಯ ಮೊದಲ ಸಭೆ ನಡೆಯಲಿದೆ. ಯಾವುದೇ ರಸ್ತೆ ಅಥವಾ ಸಾರ್ವಜನಿಕ ಸ್ಥಳದಲ್ಲಿ ನಮಾಝ್ ಸಲ್ಲಿಕೆಯಾಗದಂತೆ ಸಮಿತಿ ನೋಡಿಕೊಳ್ಳಲಿದೆ. ಯಾವುದೇ ಸ್ಥಳ ಗುರುತಿಸಿದಲ್ಲಿ ಎಲ್ಲರ ಒಪ್ಪಿಗೆ ಪಡೆದೇ ಅಲ್ಲಿ ನಮಾಝ್ಗೆ ಅವಕಾಶ ಕಲ್ಪಿಸಲಾಗುವುದು, ಯಾವುದೇ ತೆರೆದ ಸ್ಥಳದಲ್ಲಿ ನಮಾಝ್ ಸಲ್ಲಿಕೆಗೆ ಆಡಳಿತದ ಅನುಮತಿ ಅಗತ್ಯ ಎಂದು ಪೊಲೀಸರು ತಿಳಿಸಿದ್ದಾರೆ.
ಆದೇಶ ಹೊರಬಿದ್ದ ಬೆನ್ನಲ್ಲೇ ಸಂಯುಕ್ತ ಹಿಂದು ಸಂಘರ್ಷ ಸಮಿತಿಯು ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಈ ಹಿಂದೆ ನಿಗದಿಯಾಗಿದ್ದ ಎಲ್ಲಾ 37 ಸ್ಥಳಗಳಲ್ಲಿ ನಮಾಝ್ ಸಲ್ಲಿಕೆಗೆ ವಿರೋಧಿಸುವುದಾಗಿ ತಿಳಿಸಿದೆ.
ಸೋಮವಾರ ಜಿಲ್ಲಾಧಿಕಾರಿಯನ್ನು ಭೇಟಿಯಾಗಿದ್ದ ಮುಸ್ಲಿಂ ಸಮುದಾಯದ ಸದಸ್ಯರು, ಆಡಳಿತ ತಮಗೆ ಮಸೀದಿಗಳನ್ನು ನಿರ್ಮಿಸಲು ಹೆಚ್ಚುವರಿ ಜಮೀನು ಒದಗಿಸಬೇಕು ಅಥವಾ 19 ಮಸೀದಿ ಮತ್ತು ವಕ್ಫ್ ಮಂಡಳಿ ಆಸ್ತಿಗಳ ಒತ್ತುವರಿ ತೆರವುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.







