ಬಂಗಾಳ ಮಾತ್ರವಲ್ಲ ಬೇರಡೆಯೂ ಬಿಜೆಪಿಯನ್ನು ಸೋಲಿಸಬಹುದು: ಟಿಎಂಸಿ ಸಂಸದ ಡೆರೆಕ್ ಒ'ಬ್ರಿಯಾನ್

ಹೊಸದಿಲ್ಲಿ: ಬಂಗಾಳದ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಮಂಗಳವಾರ ಬಿಜೆಪಿಯಿಂದ ಎರಡು ಸ್ಥಾನಗಳನ್ನು ಕಸಿದುಕೊಳ್ಳುವ ಮೂಲಕ ನಾಲ್ಕೂ ಸ್ಥಾನಗಳನ್ನು ಗೆದ್ದುಕೊಂಡಿದೆ. ಉಪ ಚುನಾವಣೆಯ ಫಲಿತಾಂಶದ ಕುರಿತು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿರುವ ತೃಣಮೂಲ ಸಂಸದ ಡೆರೆಕ್ ಒ'ಬ್ರಿಯಾನ್, "ಬಂಗಾಳವನ್ನು ಮೀರಿ ಬಿಜೆಪಿಯನ್ನು ಸೋಲಿಸಬಹುದಾಗಿದೆ" ಎಂಬ ದೊಡ್ಡ ಸಂದೇಶವನ್ನು ಈ ಚುನಾವಣೆ ನೀಡಿದೆ ಎಂದು ಹೇಳಿದರು.
ತೃಣಮೂಲ ಬಿಜೆಪಿಯಿಂದ ಎರಡು ಅಸೆಂಬ್ಲಿ ಸ್ಥಾನಗಳಾದ ದಿನ್ಹಟಾ ಹಾಗೂ ಶಾಂತಿಪುರವನ್ನು ಭಾರೀ ಅಂತರದಿಂದ ವಶಪಡಿಸಿಕೊಂಡಿತು. ಖರ್ದಾಹ್ ಹಾಗೂ ಗೋಸಾಬಾ ವಿಧಾನಸಭಾ ಸ್ಥಾನಗಳನ್ನು ಉಳಿಸಿಕೊಂಡಿತು.
ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.
"ಬಂಗಾಳದ ಆಚೆಗೆ ಬಿಜೆಪಿ, (ಪ್ರಧಾನಿ ನರೇಂದ್ರ) ಮೋದಿ ಹಾಗೂ (ಗೃಹ ಸಚಿವ ಅಮಿತ್) ಶಾ ಅವರನ್ನು ಸೋಲಿಸಬಹುದಾದ ಸಂದೇಶ ಇದಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದು ಡೆರೆಕ್ ಒ'ಬ್ರಿಯಾನ್ NDTV ಗೆ ತಿಳಿಸಿದರು.
ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯ ಹಿನ್ನಡೆಯನ್ನು ಅವರು ಉಲ್ಲೇಖಿಸಿದರು. ಅಲ್ಲಿ ಬಿಜೆಪಿ ಪ್ರತಿಸ್ಪರ್ಧಿ ಕಾಂಗ್ರೆಸ್ ಅಕ್ಟೋಬರ್ 30 ರಂದು ಮತದಾನ ನಡೆದ ಮೂರು ವಿಧಾನಸಭೆ ಹಾಗೂ ಒಂದು ಲೋಕಸಭೆ ಸ್ಥಾನವನ್ನು ಗೆದ್ದುಕೊಂಡಿತು. ಶಿವಸೇನೆ ಮಹಾರಾಷ್ಟ್ರದ ಹೊರಗೆ ದಾದ್ರಾ ಮತ್ತು ನಗರ ಹವೇಲಿಯಲ್ಲಿ ತನ್ನ ಮೊದಲ ಲೋಕಸಭಾ ಸ್ಥಾನವನ್ನು ಗೆದ್ದಿತು.
"ಲೋಕಸಭೆಯಲ್ಲಿ ಶಿವಸೇನೆ ಗೆದ್ದಿರುವುದಕ್ಕೆ ನಾವು ಕೂಡ ಉತ್ಸುಕರಾಗಿದ್ದೇವೆ. ಹಿಮಾಚಲದಲ್ಲಿ ಬಿಜೆಪಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ... ಒಟ್ಟಾರೆಯಾಗಿ ಇದು ಬಿಜೆಪಿಗೆ ಬಹಳ ಕೆಟ್ಟ ದಿನವಾಗಿತ್ತು. ಆದರೆ ನಾವು ಈ ವೇಗವನ್ನು ಮುಂದುವರಿಸಬೇಕಾಗಿದೆ" ಎಂದು ತೃಣಮೂಲ ರಾಜ್ಯಸಭಾ ಸದಸ್ಯರು ಹೇಳಿದರು.